ಪುತ್ತೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಶನಿವಾರ ಪುತ್ತೂರು ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವ ವಿಚಾರದಲ್ಲಿ ಕೇಂದ್ರದ ಮೇಲೆ ಒತ್ತಡ ತರುವ ಕೆಲಸ ಮಾಡುವ ಜೊತೆಗೆ, ರಾಜ್ಯದಲ್ಲಿ ತುಳು ಭಾಷೆಯನ್ನು 2ನೇ ಅಧಿಕೃತ ರಾಜ್ಯ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ಪ್ರಯತ್ನ ಕೈಗೂಡುವ ವಿಶ್ವಾಸವಿದೆ ಎಂದರು.

ಪಶ್ಚಿಮ ಬಂಗಾಳ ಸೇರಿದ ಅನೇಕ ರಾಜ್ಯಗಳಲ್ಲಿ 2ನೇ ರಾಜ್ಯಭಾಷೆ ಘೋಷಣೆ ಸಂದರ್ಭ ಯಾವೆಲ್ಲ ಮಾನದಂಡ ಅನುಸರಿಸಲಾಗಿದೆ ಎಂಬುದರ ಅಧ್ಯಯನ ನಡೆಸಿ ವರದಿ ತಯಾರಿಸಲಾಗಿದೆ. ಇದನ್ನು ಸರಕಾರ ಪರಿಶೀಲಿಸಿ ಮುಂದು ವರಿಯಲಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ದೇಶ ಕಟ್ಟುವಲ್ಲಿ ಪತ್ರಿಕೆಗಳ ಪಾತ್ರ ಬಹಳಷ್ಟು ದೊಡ್ಡದು . ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ದಮನ ಮಾಡ ಲಾಗಿತ್ತು. ಆಗ ಧೀಮಂತ ಪತ್ರಿಕೆಗಳು ಭೂಗತರಾಗಿದ್ದು ಕೊಂಡೇ ಪತ್ರಿಕೆ ನಡೆಸಿ ಜನಜಾಗೃತಿ ಮೂಡಿಸಿದ್ದರು ಎಂದರು.
ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಉಪನ್ಯಾಸ ನೀಡಿ, ಮಾಧ್ಯಮ ವರದಿ ಇವತ್ತು ಪ್ರತಿಯೊಬ್ಬರ ಕೈಗೂ ಬಂದಿದೆ. ಜಗತ್ತಿನಲ್ಲಿ ಜೀವರಕ್ಷಕ ಔಷಧಿ ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ಮುದ್ರಣ ಮಾಧ್ಯಮಗಳಿವೆ. ಮಾಧ್ಯಮಗಳು ಇಷ್ಟಾದರೂ ಕೆಲವೊಂದು ಅಪವಾದಗಳನ್ನು ಕೂಡ ಎದುರಿಸುತ್ತಿವೆ. ಆರೋಪಿಯೊಬ್ಬನನ್ನು ನ್ಯಾಯಾಲಯ ವಿಚಾರಣೆ ನಡೆಸುವ ಮೊದಲೇ ಮಾಧ್ಯಮಗಳು ವಿಚಾರಣೆ ನಡೆಸಿ ತಪ್ಪಿತಸ್ಥನೆಂದು ಘೋಷಿಸುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್‍ನಾಯಕ್ ಮಾತನಾಡಿ, ಸೋಷಿಯಲ್ ಮೀಡಿಯಾದ ಅಬ್ಬರದ ನಡುವೆಯೇ ಜನ ಪತ್ರಿಕೆ ಓದುವುದು ಕಡಿಮೆ ಮಾಡಿಲ್ಲ. ಪತ್ರಿಕಾ ರಂಗದಲ್ಲಿ ಪ್ರಾಮಾಣಿಕತೆ ಬೇಕು. ಅದಿರುವ ಕಾರಣವೇ ದಕ್ಷಿಣಕನ್ನಡದ ಪತ್ರಕರ್ತರು ಎಲ್ಲಿ ಹೋದರೂ ಛಾಪು ಮೂಡಿಸುತ್ತಾರೆ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಶುಭಹಾರೈಸಿದರು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವಿನಿ ಕೃಷ್ಣ ಅಸೋಸಿಯೇಶನ್ ಆಫ್ ಸಿವಿಲ್ ಎಂಜಿ ನಿಯರ್ಸ್ (ಎಸಿಸಿಇ-ಐ) ಪುತ್ತೂರು ಸೆಂಟರ್ ಅಧ್ಯಕ್ಷ ಪ್ರಮೋದ್ ಕುಮಾರ್ ಕೆ.ಕೆ., ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿದರು.
ಸಿ.ಸಿ. ಕ್ಯಾಮೆರಾ ಹಸ್ತಾಂತರ: ಶೇಟ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ವತಿಯಿಂದ ಪತ್ರಿಕಾ ಭವನಕ್ಕೆ ಸಿ.ಸಿ. ಕ್ಯಾಮೆರಾ ಕೊಡುಗೆ ನೀಡಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಸಿದ್ದಿಕ್ ನೀರಾಜೆ ಅಧ್ಯಕ್ಷತೆ ವಹಿಸಿದ್ದರು.
ಪತ್ರಿಕಾ ವಿತರಕರಾದ ವಿಶ್ವನಾಥ್ ಅವರನ್ನು ಶಾಸಕರು ಪತ್ರಕರ್ತರ ಸಂಘದ ಪರವಾಗಿ ಸನ್ಮಾನಿಸಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಾದ ಹರ್ಷೇಂದ್ರ ಪ್ರಸಾದ್, ಮಹೇಶ್ ಪ್ರಸಾದ್, ದೀಪ್ತಿ ಭಟ್, ಎ.ಯು.ಅವನೀಶ್ ಕುಮಾರ್, ಸಮ್ಯಕ್, ಸಿಹಾ ಶಮ್ರಾ, ಪುಣ್ಯಶ್ರೀ ಪಿ. ಅವರನ್ನು ಸಂಘದ ಪರವಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಸನ್ಮಾನಿಸಿದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸುಧಾಕರ ಸುವರ್ಣ ಪ್ರಾಸ್ತಾವಿಕ ಮಾತ ನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಮೇಘಾ ಪಾಲೆತ್ತಾಡಿ ಮತ್ತು ರೋಟರಿ ಯುವ ಸಂಸ್ಥೆಯ ಕಾರ್ಯದರ್ಶಿ ವಚನಾ ಜಯರಾಂ ಸನ್ಮಾನ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ವಂದಿಸಿದರು. ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರ್ವಹಿಸಿದರು.