ಪುತ್ತೂರು: ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸೇವಾ ಸಂಘ ಹಾಗೂ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಸಹಯೋಗದಲ್ಲಿ ‘ಆಟಿ ಹಬ್ಬ-2024’ ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳಾದ ಚೆನ್ನೆಕಾಯಿ ಹೆಕ್ಕುವುದು, ಅಡಿಕೆ ಹಾಳೆಯಲ್ಲಿ ಕೂತು ಎಳೆಯುವುದು, ಜನಪದ ಗೀತೆ, ಮದರಂಗಿ, ಶೋಭಾನೆ ಹಾಡು, ತೆಂಗಿನ ಕಾಯಿ ಹೊರಳಿಸುವುದು ಸಹಿತ ವಿವಿಧ ಬಗೆ ಆಟಿ ತಿನಸುಗಳನ್ನು ಮಾಡುವ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಬೆಳಿಗ್ಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಚೆನ್ನಮ್ಮ ಸುರುಳಿದೊಲೆ ತೆಂಕಿಲ ಚನ್ನೆಮಣೆ ಆಡುವ ಮೂಲಕ ನೆರವೇರಿಸಿದರು. ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಕೆ. ಗೌಡ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಸಂಜೀವ ಮಠಂದೂರು, ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಆಶ್ವಿನಿ ಕೆ. ಭಾಗವಹಿಸಿ ಶುಭ ಹಾರೈಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಅಧ್ಯಕ್ಷ ರವಿ ಮುಂಗ್ಲಿಮನೆ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಒಕ್ಕಲಿಗ ಸ್ವ ಸಹಾಯ ಸಂಘದ ಅಧ್ಯಕ್ಷ ಡಿ.ವಿ.ಮನೋಹರ, ಮಹಿಳಾ ಸಂಘದ ಗೌರವಾಧ್ಯಕ್ಷೆ ಮೀನಾಕ್ಷಿ ಡಿ., ಕಾರ್ಯದರ್ಶಿ ಸಂಧ್ಯಾ ಶಶಿಧರ್, ಉಪಾಧ್ಯಕ್ಷೆ ರತ್ನಾ ಕಿಶೋರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ನಾಟಿವೈದ್ಯೆ ಸುಶೀಲಾ ಹಾಗೂ ಯಕ್ಷಗಾನ ಕಲಾವಿದೆ ಶ್ರುತಿ ವಿಸ್ಮಿತ್ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಆಟಿ ಹಬ್ಬ ವಿಶೇಷ ಊಟೋಪಚಾರದ ಅಂಗವಾಗಿ ಮನೆಯಲ್ಲೇ ತಯಾರಿಸಿದ ಕಷಾಯ ಜ್ಯೂನ್, ಹಲಸು, ಕೆಸು, ಕಣಿಲೆಯ ಖಾದ್ಯ, ತಗಟೆ ಸೊಪ್ಪು, ಪಸಿಂಗರಿ ಸಹಿತ ವಿವಿಧ ಆಟಿ ತಿಂಗಳ, ತುಳುನಾಡಿನ ವಿಶೇಷ ಖಾದ್ಯಗಳನ್ನು ನೆರೆದಿದ್ದವರು ಸವಿದರು.