ಕೇರಳ : ಮತ್ತೆ ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದ್ದು, 14 ವರ್ಷದ ಬಾಲಕನಲ್ಲಿ ನಿಫಾ ವೈರಸ್ ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಕೇರಳದಲ್ಲಿ ಹೆಚ್ಚಿನ ನಿಗಾ ವಹಿಸಲು ಎಚ್ಚರಿಕೆ ನೀಡಲಾಗಿದೆ.
ಆರೋಗ್ಯ ಸಚಿವೆ ವೀಣಾ ಜಾರ್ಜ್ ನಿಫಾ ವೈರಸ್ ಕುರಿತು ನಿಗಾ ವಹಿಸಲು ಸೂಚನೆ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 14 ವರ್ಷದ ಬಾಲಕನಲ್ಲಿ ನಿಫಾ ಸೋಂಕಿರುವುದನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯು (ಎನ್‌ಐವಿ) ದೃಢಪಡಿಸಿದೆ. ಸೋಂಕು ತಗುಲಿದ ಬಾಲಕನನ್ನು ಕೋಯಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಆತನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಬಾಲಕನ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಮಾಡಲಾಗಿದ್ದು, ಅವರನ್ನು ಕ್ವಾರಂಟೇನ್ ಮಾಡಲಾಗಿದೆ. ಎಲ್ಲರ ಮಾದರಿಗಳನ್ನು ರಾಷ್ಟ್ರೀಯ ವೈರಾಣು ಸಂಸ್ಥೆಗೆ ಪರೀಕ್ಷೆಗೆ ಕಳಿಸಲಾಗಿದೆ’ ಎಂದು ಸಚಿವೆ ವೀಣಾ ಜಾರ್ಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಲಪ್ಪುರಂ ಜಿಲ್ಲೆಯ ಕೆಲ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಮಾದರಿಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಇನ್ನು ಕೇರಳಕ್ಕೆ ನಿಫಾ ವೈರಸ್ ಹೊಸದಲ್ಲ. 2018ರಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ನಿಫಾ ವೈರಸ್ ದಾಳಿ ಮಾಡಿತ್ತು. ಈ ವೇಳೆ ಕೋಲಾಹಲ ಸೃಷ್ಟಿಯಾಗಿತ್ತು. 2018, 2021 ಹಾಗೂ 2023ರಲ್ಲಿ ನಿಫಾ ವೈರಸ್ ಅಬ್ಬರಿಸಿತ್ತು. 2019ರಲ್ಲಿ ಎರ್ನಾಕುಲಂ ಜಿಲ್ಲೆಯಲ್ಲೂ ನಿಫಾ ವೈರಸ್ ಕಾಣಿಸಿಕೊಂಡಿತ್ತು.