ಐಜ್ವಾಲ್: ಮ್ಯಾನ್ಮಾರ್‌ನಿಂದ ಮಿಜೋರಾಂಗೆ ಅಡಿಕೆ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಗುವಾಹಟಿ ಹೈಕೋರ್ಟ್ ಐಜ್ವಾಲ್ ಪೀಠ ಕೇಂದ್ರ ತನಿಖಾ ಸಂಸ್ಥೆಗೆ ಆದೇಶ ನೀಡಿದೆ.
ಸಾಮಾಜಿಕ ಕಾರ್ಯಕರ್ತೆ ನನ್ನಮಾಚೌಂಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಆದೇಶ ನೀಡಿದೆ. ‘ಮ್ಯಾನ್ಮಾರ್’ ಮೂಲದಿಂದ ಈ ಕೃತ್ಯ ನಡೆದಿರುವ ಶಂಕೆ ಇದೆ. ಅಂತಾರಾಷ್ಟ್ರೀಯ ಕಳ್ಳಸಾಗಣೆ ಪ್ರಕರಣ ಇದಾಗಿರುವುದರಿಂದ ತಾವು ಹೆಚ್ಚಿನ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ರಾಜ್ಯ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಇದನ್ನು ಆಧರಿಸಿ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದೆ. ಕಳ್ಳಸಾಗಣೆ ತಡೆಯಲು ಸರ್ಕಾರ ವಿಫಲಗೊಂಡಿದೆ ಎಂದು ಆರೋಪಿಸಿರುವ ಸ್ಥಳೀಯ ಅಡಿಕೆ ಬೆಳೆಗಾರರು, ತಾವೇ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಕಳ್ಳಸಾಗಣೆ ಮೂಲಕ ಬರುತ್ತಿರುವ ಅಡಿಕೆ ಹಾಗೂ ಸಾಗಿಸುತ್ತಿರುವ ಹಲವು ವಾಹನಗಳಿಗೆ ಸ್ಥಳೀಯ ಅಡಿಕೆ ಬೆಳೆಗಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಕಳ್ಳಸಾಗಣೆದಾರರ ನಡುವಿನ ಹೊಂದಾಣಿಕೆಯಿಂದ ಈ ಅವ್ಯವಹಾರ ನಡೆಯುತ್ತಿದ್ದು ಹಲವು ವರ್ಷಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದ ಕುಮ್ಮಕ್ಕು ಕೂಡ ಇದೆ ಎಂದು ವನಮಾಚೌಂಗಿ ಹೇಳಿದ್ದಾರೆ