ಸುಬ್ರಹ್ಮಣ್ಯ : ಶಿರಾಡಿ ಘಾಟಿ ರಸ್ತೆಯಲ್ಲಿ ದಿನಪೂರ್ತಿ ವಾಹನ ಸಂಚಾರ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಶುಕ್ರವಾರ ಹಾಸನ ಜಿಲ್ಲಾಡಳಿತ ವಾಪಸ್ ಪಡೆದು, ನಿರ್ಬಂಧಿತ ನಿಯಮಗಳಡಿ ವಾಹನ ಸಂಚಾರಕ್ಕೆ ಅವಕಾಶ ನೀಡಿ ಹೊಸ ಆದೇಶ ಹೊರಡಿಸಿದೆ.
ಶಿರಾಡಿ ಘಾಟಿಯಲ್ಲಿ ಶನಿವಾರ (ಜು.20)ದಿಂದ ಬೆಳಗ್ಗೆ 6ರಿಂದ ಸಂಜೆ 6ರ ತನಕ ಶಿರಾಡಿ ಹೆದ್ದಾರಿ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಕಲೇಶಪುರ ಉಪವಿಭಾಗಾಧಿಕಾರಿ ಶೃತಿ ತಿಳಿಸಿದ್ದಾರೆ. ರಾತ್ರಿ ಅವಧಿಯಲ್ಲಿ ವಾಹನ ಸಂಚಾರಕ್ಕೆ ನಿಷೇಧಿಸಿದೆ. ಗುರುವಾರ ಬೆಳಿಗ್ಗೆ ದೊಡ್ಡತಪ್ಪು ಬಳಿ ಗುಡ್ಡ ಕುಸಿತ ಸಂಭವಿಸಿ, ತಾತ್ಕಾಲಿಕ ತಡೆ ಹೇರಲಾಗಿತ್ತು.
ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ತಡೆ ನೀಡಿದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಸಂಕಷ್ಟ ಅನುಭವಿಸಬೇಕಾಗಿದೆ.ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮನವಿ ಮೇರೆಗೆ ಹೆಚ್ಚುವರಿ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ಗುರುವಾರ ರಾತ್ರಿಯಿಂದ ವಾಹನ ಸಂಚಾರ ನಿರ್ಬಂಧ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆಯೇ ನೂರಾರು ವಾಹನಗಳು ನಿಂತಿದ್ದು, ನಡು ರಸ್ತೆಯಲ್ಲಿಯೇ ದೊಡ್ಡ ದೊಡ್ಡ ಟ್ರಕ್ ಹಾಗೂ ಲಾರಿಗಳ ಚಾಲಕರು ಪರದಾಡುವಂತಾಗಿದೆ. ಶಿರಾಡಿ ಘಾಟ್ ಸಂಪರ್ಕಿಸುವ ಗುಂಡ್ಯಾ ಬಳಿ ಭಾರಿ ವಾಹನಗಳು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಊಟ, ತಿಂಡಿ, ಕುಡಿಯುವ ನೀರು, ಶೌಚಾಲಯ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.