ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಮಂಗಳೂರು ವಿಭಾಗ ಮಟ್ಟದ ಒಂದು ದಿನದ ‘ವೃತ್ತಿಪರ ಮಾರ್ಗದರ್ಶನ ಕಾರ್ಯಾಗಾರ’ ನಡೆಯಿತು.

ಕಾರ್ಯಾಗಾರವನ್ನು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಪ್ರೋ. ಸಿ. ಬಸವರಾಜು ಉದ್ಘಾಟಿಸಿ ಮಾತನಾಡಿ, ಕಾನೂನು ಕಲಿಕಾರ್ಥಿಗಳಿಗೆ ಜ್ಞಾನವನ್ನು ಗಳಿಸುವ ಆಸಕ್ತಿ ಇರಬೇಕು. ಅದಕ್ಕಾಗಿ ನಿರಂತರ ಪ್ರಯತ್ನವನ್ನು ಮಾಡುವ ಮನೋಭಾವನೆ ಬೆಳೆಸಿಕೊಂಡಾಗ ಸಾಧನೆಯನ್ನು ಮಾಡಬಹುದು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ವ್ಯಕ್ತಪಡಿಸಲು ಉತ್ತಮ ವೇದಿಕೆ ಬೇಕಾಗುತ್ತೆ. ಅಂತಹ ವೇದಿಕೆಯನ್ನು ಇಂತಹ ಕಾರ್ಯಗಾರಗಳ ಮೂಲಕ ನೀಡುವ ಕೆಲಸವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಮಾಡುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಪಡೆದುಕೊಳ್ಳಿ ಎಂದು ಕರೆ ನೀಡಿದರು.

ದೀಪ ಬೆಳಗಿ ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಪ್ರಭಾರ ನಿರ್ದೇಶಕ ಡಾ. ಗಿರೀಶ್ ಕೆ. ಸಿ. ಮಾತನಾಡಿ, ವಿದ್ಯಾರ್ಥಿ ಜೀವನ ಮುಗಿಯುವ ಹಂತದಲ್ಲಿ ಉತ್ತಮ ಅವಕಾಶ ಬಂದಾಗ ಅದನ್ನು ಗುರುತಿಸಿ ಗಟ್ಟಿಯಾಗಿ ಹಿಡಿದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಆದಕ್ಕಾಗಿ ನೀವು ನಿರಂತರ ಸಿದ್ಧತೆ, ಪ್ರಯತ್ನ ನಡೆಸುತ್ತಲೇ ಇರಬೇಕು. ಯಶಸ್ಸಿಗೆ “ಉತ್ತಮ ಅವಕಾಶ’ ಮುಖ್ಯ ಎನ್ನುವುದು ಎಷ್ಟು ಸತ್ಯವೋ, “ಉತ್ತಮ ತಯಾರಿ’ಯೂ ಅಷ್ಟೇ ಮುಖ್ಯವಾಗುತ್ತದೆ. ಕಾನೂನು ವಿದ್ಯಾರ್ಥಿಗಳಾಗಿ ನೀವು ಎಲ್ಲಾ ರೀತಿಯಿಂದಲೂ ಪ್ರಯತ್ನಪಟ್ಟಾಗ ಖಂಡಿತ ಯಶಸ್ಸು ದೊರೆಯುತ್ತದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ರ್ದೇಶಕಿ ಡಾ. ಸುಧಾ ಎಸ್. ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘವು ಸುಮಾರು 80ರಷ್ಟು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ, ಇಂದಿನ ಸಮಾಜಕ್ಕೆ ಅಗತ್ಯವಾಗಿರುವ ಮೌಲ್ಯವನ್ನು ಒಳಗೊಂಡ ಶಿಕ್ಷಣ ನೀಡುವ ಜವಾಬ್ದಾರಿಯನ್ನು ನಿರಂತರವಾಗಿ ಮಾಡುತ್ತಿದೆ. ಪ್ರತಿ ಶಿಕ್ಷಣ ಸಂಸ್ಥೆಯು ಸಮಾಜಕ್ಕೆ ಪೂರಕವಾಗುವ ಪ್ರಜ್ಞಾವಂತ ಯುವಸಮೂಹವನ್ನು ರೂಪಿಸುತ್ತಿದೆ. ಇದೇ ರೀತಿ ಕಾನೂನು ಮಹಾವಿದ್ಯಾಲಯವು ಈ ನಿಟ್ಟಿನಲ್ಲಿ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಇಂದಿನ ಕಾರ್ಯಕ್ರಮವು ಸಹಾ ಮುಂದೆ ಸಮಾಜಕ್ಕೆ ಕಾಲಿಡಲಿರುವ ಯುವ ನ್ಯಾಯವಾದಿಗಳಿಗೆ ಮಾರ್ಗದರ್ಶನ ಮಾಡುವ ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದರು.
ವೇದಿಕೆಯಲ್ಲಿ ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಕಾರ್ಯಕ್ರಮ ಸಂಯೋಜಕ ಡಾ. ರಾಜೇಂದ್ರ ಇಟ್ಟಣಗಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ವಿಜಯನಾರಾಯಣ ಕೆ. ಎಂ., ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ. ಬಿ.ಕೆ. ರವೀಂದ್ರ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ಲೇಸ್ ಮೆಂಟ್ ಸೆಲ್ ನ ಸಂಯೋಜಕಿ ಸುಭಾಷಿನಿ ಜೆ. ಉಪಸ್ಥಿತರಿದ್ದರು.
ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ. ಪಿ. ಸ್ವಾಗತಿಸಿ, ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀರಕ್ಷಾ ವಂದಿಸಿದರು. ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ಪಿ. ಎಂ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಮಂಗಳೂರು ವಿಭಾಗದ ಏಳು ಕಾನೂನು ಕಾಲೇಜುಗಳ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದೇ ರೀತಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಎರಡು ವಿಶಿಷ್ಟ ವಿಷಯಗಳ ಕುರಿತು ವಿಚಾರ ಮಂಡನೆಯನ್ನು ಸಂಪನ್ಮೂಲ ವ್ಯಕ್ತಿಗಳು ಮಾಡಿದರು.