ಪುತ್ತೂರಿನಲ್ಲಿ ಮೇಳೈಸಿದ ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ | ತೆರೆದ ವಾಹನದಲ್ಲಿ ಕರೆದೊಯ್ಯುವ ಮೂಲಕ ಇಬ್ಬರು ಕಾರ್ಗಿಲ್ ಯೋಧರಿಗೆ ಗೌರವಾರ್ಪಣೆ

ಪುತ್ತೂರು: ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿ, ಪುತ್ತೂರು ಮಾಜಿ ಸೈನಿಕರ ಸಂಘ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆ ಆಡಳಿತ ಸೌಧದ ಬಳಿ ಇರುವ ಅಮರ್ ಜವಾನ್ ಜ್ಯೀತಿ ಸ್ಮಾರಕದ ಬಳಿ ಶುಕ್ರವಾರ ನಡೆಯಿತು.

ಕಾರ್ಗಿಲ್ ವರ್ಷಾಚರಣೆ ಅಂಗವಾಗಿ ನಗರದ ದರ್ಬೆ ವೃತ್ತದಿಂದ ಬೆಳಿಗ್ಗೆ 9.30 ಕ್ಕೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಬ್ಯಾಂಡ್‍, ವಾದ್ಯಗಳೊಂದಿಗೆ ಪಥ ಸಂಚಲನ, ದೇಶ ಹಾಗೂ ಮಿಲಿಟರಿ ಶಕ್ತಿಯನ್ನು ಅನಾವರಣಗೊಳಿಸುವ ಸ್ತಬ್ಧಚಿತ್ರ ಮೂಲಕ ನಡೆದ ಬೃಹತ್ ಮೆರವಣಿಗೆಯಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಕ್ಯಾ,ಯೋಗೀದ್ರ ಸಿಂಗ್ ಯಾದವ್ ಹಾಗೂ ಕ್ಯಾ.ನವೀನ್ ನಾಗಪ್ಪ ಅವರನ್ನು ತೆರೆದ ವಾಹನದಲ್ಲಿ ಮುಖ್ಯ ರಸ್ತೆಯಿಂದ ಸಮಾರಂಭದ ನಡೆಯುವ ಕಿಲ್ಲೆ ಮೈದಾನದ ತನಕ ಕರೆ ತರಲಾಯಿತು.

ಬಳಿಕ ಅಮರ್ ಜವಾನ್ ಸ್ಮಾರಕದ ಬಳಿ ಇಬ್ಬರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರನ್ನು ಗೌರವಿಸಲು ಸಾರ್ವಜನಿಕರಿಗೆ ಅವಕಾಶ ಮಾಡಲಾಗಿತ್ತು. ಬಳಿಕ ಅಮರ್ ಜವಾನ್ ಸ್ಮಾರಕಕ್ಕೆ ಕ್ಯಾ.ಯೋಗೀಂದ್ರ ಸಿಂಗ್ ಯಾದವ್ ಹಾಗೂ ಕ್ಯಾ.ನವೀನ್ ನಾಗಪ್ಪ ಅವರು ಗೌರವಾರ್ಪಣೆ ಸಲ್ಲಿಸಿದರು.



































 
 

ಬಳಿಕ ಕಿಲ್ಲೆ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯೋಧ, ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾ.ಯೋಗೀಂದ್ರ ಸಿಂಗ್ ಯಾದವ್ ಮಾತನಾಡಿ, ದೇಶಕ್ಕಾಗಿ ಈ ದೇಹ ಸಮರ್ಪಣೆಯಾಗಬೇಕೆಂಬ ಒಂದೇ ಕನಸಿನೊಂದಿಗೆ ಸೇನೆಗೆ ಸೇರಿ ಸೇವೆ ಸಲ್ಲಿಸುವುದಕ್ಕೆ ಸಾಧ್ಯವಾಯಿತು. ಅಕ್ಷರಶಃ ತೆವಳಿಕೊಂಡು ಕಡಿದಾದ ಬೆಟ್ಟವನ್ನೇರುತ್ತಾ ವಿರೋಧಿಗಳೊಂದಿಗೆ ಹೋರಾಡಬೇಕಿತ್ತು. ಆದರೆ ರಾಷ್ಟ್ರ ಎಂಬ ಭಾವನೆ ಬಂದಾಗ ಎಲ್ಲವೂ ಸಾಧ್ಯವಾಗುತ್ತದೆ. ದೇಶದ ಒಳಗಿನ ವ್ಯವಸ್ಥೆ ಸದೃಢವಾಗಿ ಬೆಳೆಯಬೇಕಾದರೆ ಸೈನ್ಯ ಗಡಿ ಭಾಗದಲ್ಲಿ ಸದಾ ಸನ್ನದ್ಧವಾಗಿರಬೇಕು ಎಂದು ಹೇಳಿದ ಅವರು, ಇಂದು ನಾವು ಸಿನೆಮಾ ನಟರನ್ನು, ಕ್ರಿಕೆಟಿಗರನ್ನು ಹೀರೋಗಳಾಗಿ ಕಾಣುತ್ತಿದ್ದೇವೆ. ಆದರೆ ನಮಗಾಗಿ ಪ್ರಾಣತೆತ್ತ ಯೋಧರನ್ನು ನಿರ್ಲಕ್ಷಿಸುತ್ತಿದ್ದೇವೆ. ನಮ್ಮನ್ನು ಕಾಪಾಡುವ ಹಾದಿಯಲ್ಲಿ ಜೀವ ಅರ್ಪಿಸಿದ ಯೋಧರನ್ನು ನಮ್ಮ ಆದರ್ಶವಾಗಿ ಸ್ವೀಕರಿಸಬೇಕು. ಸ್ಪಷ್ಟ ಗುರಿಯೊಂದಿಗೆ ಬದುಕನ್ನು ರೂಪಿಸಿಕೊಳ್ಳಬೇಕು ಎಂದರಲ್ಲದೆ ಜೀವನ ತುಚ್ಚವಾದದ್ದಲ್ಲ, ಅದು ಅಮೂಲ್ಯವಾದದ್ದು. ಈ ಬದುಕನ್ನು ರೀಲ್ಸ್ ಮಾಡುತ್ತಾ, ರಾತ್ರಿ ನಿದ್ದೆಗೆಡುತ್ತಾ ಹಾಳುಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಕರೆಯಿತ್ತರು.

ಇನ್ನೋರ್ವ ಕಾರ್ಗಿಲ್ ಯೋಧ, ಸೇವಾ ಪದಕ ಪುರಸ್ಕೃತ ಕ್ಯಾ.ನವೀನ್ ನಾಗಪ್ಪ ಮಾತನಾಡಿ, ಪಾಕಿಸ್ಥಾನಕ್ಕೆ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನ್ಯ ಕೊಟ್ಟ ಹೊಡೆತ ಎಷ್ಟು ತೀವ್ರವಾಗಿತ್ತೆಂದರೆ ಅನಂತರದ ಈ ಇಪ್ಪತ್ತೈದು ವರ್ಷಗಳಲ್ಲಿ ಪಾಕಿಸ್ಥಾನ ಯುದ್ಧಕ್ಕೆ ಬರುವ ಧೈರ್ಯವನ್ನೇ ತೋರಿಸಿಲ್ಲ. ಭಾರತೀಯ ಸೈನಿಕರು ನೈತಿಕ ಹಾದಿಯಲ್ಲೇ ಮುಂದುವರೆಯುತ್ತಾರೆಂಬುದೇ ಬಹುದೊಡ್ಡ ಆತ್ಮಶಕ್ತಿ. ಪಾಕಿಸ್ಥಾನ ತನ್ನ ಯೋಧರು ಸತ್ತಾಗ ಹೆಣವನ್ನೂ ಸ್ವೀಕರಿಸಲಿಲ್ಲ. ಆಗ ಭಾರತೀಯ ಸೈನಿಕರೇ ಆ ಸೈನಿಕರನ್ನು ಅವರ ಧರ್ಮಕ್ಕನುಗುಣವಾಗಿ, ಅವರ ರಾಷ್ಟ್ರಧ್ವಜ ಹೊದೆಸಿ ದಫನ ಮಾಡಿದ್ದು ಇಲ್ಲಿಯ ಸಂಸ್ಕಾರದ ಪ್ರತಿರೂಪ ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ. ಶೆಟ್ಟಿ, ನಗರಸಭೆ ಆಯುಕ್ತ ಮಧು ಎಸ್‍.ಮನೋಹರ್, ಶಿಕ್ಷಣಾಧಿಕಾರಿ ಲೋಕೇಶ್‍ ಎಸ್‍.ಆರ್‍., ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್‍ ನಟ್ಟೋಜ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಜಂಟಿ ಆಶ್ರಯದಲ್ಲಿ ದ.ಕ., ಕೊಡಗು ಹಾಗೂ ಕಾಸರಗೋಡು ಜಿಲ್ಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.

ಪುತ್ತೂರು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿದರು.ನ್ಯಾಯವಾದಿ ಮಹೇಶ್ ಕಜೆ ವಂದಿಸಿದರು. ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಕ್ಯಾ,ಯೋಗೀದ್ರ ಸಿಂಗ್ ಯಾದವ್ ಹಾಗೂ ಕ್ಯಾ.ನವೀನ್ ನಾಗಪ್ಪ ಅವರಿಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸಂಸ್ಥೆಯ ಅಧ್ಯಕ್ಷ  ಸುಬ್ರಹ್ಮಣ್ಯ ನಟ್ಟೋಜ ವಿಶೇಷವಾಗಿ ಸೇನಾ ಪದಕದ ಚಿನ್ನದ ಪ್ರತಿ ರೂಪವನ್ನು ನೀಡಿ ಗೌರವಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top