ಶಿಶಿಲ: ಗುರುವಾರ ಸುರಿದ ಭಾರೀ ಮಳೆಯಿಂದಾಗಿ ಇತಿಹಾಸ ಪ್ರಸಿದ್ಧ ಮತ್ಸ್ಯತೀರ್ಥ ಎಂದೇ ಹೆಸರುವಾಸಿಯಾದ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಸಮೀಪ ಹರಿಯುತ್ತಿರುವ ಕಪಿಲ ನದಿಯಲ್ಲಿ ಇಂದು ಸಂಜೆಯಿಂದ ನಿರಂತರವಾಗಿ ಪ್ರವಾಹ ಏರಿಕೆಯಾಗುತ್ತಿದ್ದು, ದೇವಸ್ಥಾನದ ಅಂಗಳಕ್ಕೆ ನೀರು ನುಗ್ಗಿದೆ.
ಬೈರಾಪುರ ಘಾಟಿಯಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಕಪಿಲ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯಲಾರಂಭಿಸಿದೆ. ಪ್ರವಾಹದ ಜೊತೆ ದೊಡ್ಡ, ದೊಡ್ಡ ಗಾತ್ರದ ಮರಗಳು ಬರುತ್ತಿದ್ದು, ಶಿಶಿಲದ ಕಿಂಡಿಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರಿಂದಾಗಿ ಪ್ರವಾಹ ಹರಿಯಲು ಅಡ್ಡಿಯಾಗಿ ನೀರು ಏರುತ್ತಿದೆ. ಈ ವರ್ಷ ಪ್ರಥಮ ಬಾರಿಗೆ ನೀರು ದೇವಸ್ಥಾನದ ಅಂಗಳಕ್ಕೆ ಬಂದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ದೇವಸ್ಥಾನ ಪರಿಸರದಲ್ಲಿ ಆನೇಕ ಮನೆಗಳಿದ್ದು, ದೇವಸ್ಥಾನದ ಅಂಗಳ ತನಕ ನೀರು ಬಂದಿರುವುದರಿಂದ ಈ ಮನೆಯವರು ಭಯಭೀತರಾಗಿದ್ದಾರೆ. ಪ್ರವಾಹದಲ್ಲಿ ಇನ್ನಷ್ಟು ಮರಗಳು ಬಂದು ಕಿಂಡಿಅಣೆಕಟ್ಟಿನಲ್ಲಿ ಸಿಲುಕಿಕೊಂಡರೆ ಪ್ರವಾಹ ಮತ್ತಷ್ಟು ಏರುವ ಸಾಧ್ಯತೆಯಿಂದ ಎನ್ನುತ್ತಾರೆ.