ಪುತ್ತೂರು: ಬೆಂಗಳೂರು ಮೂಲದ ಇಬ್ಬರು ಯುವಕರು ಹೆದ್ದಾರಿ ಬದಿಯ ಅಂಗಡಿಯಲ್ಲಿದ್ದ ವೃದ್ದೆಯ ಚಿನ್ನದ ಸರ ಸೆಳೆದು ಪರಾರಿಯಾಗಲು ಯತ್ನಿಸಿ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಉಪ್ಪಿನಂಗಡಿ ಬಳಿಯ ಅಡ್ಡಹೊಳೆ ಎಂಬಲ್ಲಿ ನಡೆದಿದೆ.
ನೆಲ್ಯಾಡಿ ಬಳಿಯ ಅಡ್ಡಹೊಳೆಯ ಹೆದ್ದಾರಿ ಬದಿಯ ಡ್ರೈ ಫ್ರುಟ್ಸ್ ಅಂಗಡಿಯಲ್ಲಿ ಒಂಟಿಯಾಗಿದ್ದ ವೃದ್ಧ ಮಹಿಳೆ ತೇಸ್ಯಮ್ಮ (60) ಎಂಬುವವರ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದು ಯುವಕರು ಪರಾರಿಯಾಗಲು ಯತ್ನಿಸಿದ್ದು, ತಕ್ಷಣ ಮಹಿಳೆಯ ಬೊಬ್ಬೆ ಕೇಳಿ ಸ್ಥಳೀಯರು ಸೇರಿ ಯುವಕರನ್ನು ಹಿಡಿದು ಥಳಿಸಿದ್ದಾರೆ.
ಕೃತ್ಯದ ಆರೋಪಿಗಳಾದ ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25) ಮಂಗಳೂರಿನಲ್ಲಿ ವಾಹನ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿಯೊಂದಿಗೆ ಪರಾರಿಯಾಗಿ, ಕೃತ್ಯಕ್ಕೆ ಕದ್ದು ತಂದ ಸ್ಕೂಟಿಯನ್ನು ಬಳಸಿದ್ದಾರೆ ಎಂಬುದು ಪತ್ತೆಯಾಗಿದೆ. ಘಟನೆ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.