ಪುತ್ತೂರು: ಪುತ್ತೂರು ಅಮರ್ ಜವಾನ್ ಜ್ಯೋತಿ ಸ್ಮಾರಕದ ಸಂರಕ್ಷಣಾ ಸಮಿತಿ ಹಾಗೂ ಮಾಜಿ ಸೈನಿಕರ ಸಂಘದ ಸಹಯೋಗದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಜು.19 ರಂದು ಅಮರ್ ಜವಾನ್ ಸ್ಮಾರಕದ ಬಳಿ ನಡೆಯಲಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಸ್ತುತ ವರ್ಷ ಕಾರ್ಗಿಲ್ ವಿಜಯೋತ್ಸವಕ್ಕೆ ಇಪ್ಪತ್ತೈದರ ಸಂಭ್ರಮ. ಈ ಬಾರಿಯ ಕಾರ್ಗಿಲ್ ವಿಜಯೋತ್ಸವವನ್ನು ದಾಖಲಾರ್ಹ ಚರಿತ್ರೆಯಾಗಿ ರೂಪಿಸಬೇಕೆಂಬ ಇರಾದೆ ಅಂಬಿಕಾ ಶಿಕ್ಷಣ ಸಂಸ್ಥೆಗಳದ್ದು. ಈ ನೆಲೆಯಲ್ಲಿ ಜನಪ್ರತಿನಿಧಿಗಳು, ಸಹಾಯಕ ಆಯುಕ್ತರಾದಿಯಾಗಿ ಸಮಸ್ತ ಅಧಿಕಾರಿ ವರ್ಗ, ವಿವಿಧ ಸರ್ಕಾರಿ ಇಲಾಖೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಪುತ್ತೂರಿನ ನಿವೃತ್ತ ಯೋಧರ ಸಂಘ, ವರ್ತಕರ ಸಂಘ, ಅಮರ್ ಜವಾನ್ ಜ್ಯೋತಿ ಸಂಕ್ಷರಣಾ ಸಮಿತಿ ಪುತ್ತೂರು, ರೋಟರಿ, ಲಯನ್ಸ್, ಜೇಸೀ ಮೊದಲಾದ ಸಮಾಜಸೇವಾ ಸಂಘಟನೆಗಳು ಮಾತ್ರವಲ್ಲದೆ ವಿವಿಧ ಸಂಘ ಸಂಸ್ಥೆಗಳನ್ನೊಳಗೊಂಡಂತೆ ಇಡಿಯ ಸಮಾಜವನ್ನು ಸೇರಿಸಿಕೊಂಡು ಜು.19 ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಯೋಜಿಸುವ ರೂಪುರೇಷೆ ಸಿದ್ಧಗೊಂಡಿದೆ ಎಂದು ಅವರು ತಿಳಿಸಿದರು.
ಈ ಬಾರಿಯ ಕಾರ್ಗಿಲ್ ವಿಜಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಯೋಗೀಂದ್ರ ಸಿಂಗ್ ಯಾದವ್, ಕ್ಯಾಪ್ಟನ್ ನವೀನ್ ನಾಗಪ್ಪ ಪಾಲ್ಗೊಳ್ಳಲಿದ್ದಾರೆ. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪುತ್ತೂರಿನ ಮಾಜಿ ಶಾಸಕರುಗಳಾದ ಸಂಜೀವ ಮಠಂದೂರು, ಶಕುಂತಲಾ ಶೆಟ್ಟಿ, ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ನಗರಸಭಾ ಆಯುಕ್ತ ಮಧು ಎಸ್ ಮನೋಹರ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿರಲಿದ್ದಾರೆ.
ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ದರ್ಬೆಯಿಂದ ಬೆಳಿಗ್ಗೆ 9.30 ಕ್ಕೆ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಕ್ಯಾಪ್ಟನ್ ಯೋಗೀಂದ್ರ ಸಿಂಗ್ ಯಾದವ್ ಹಾಗೂ ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನು ತೆರದ ವಾಹನದಲ್ಲಿ ಕರೆತರಲಾಗುವುದು. ಮೆರವಣಿಗೆ ವೇಳೆ ವ್ಯಾಪಾರಸ್ಥರು, ಜನಸಾಮಾನ್ಯರಿಗೆ ಈ ಇಬ್ಬರು ಯೋಧರನ್ನು ಹಾರಾರ್ಪಣೆಯ ಮೂಲಕ ಗೌರವಿಸುವುದಕ್ಕೆ ಅವಕಾಶವಿರುತ್ತದೆ. ಈ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳ ಮಾಲಿಕರು ಕಾರ್ಯಕ್ರಮ ಮುಗಿಯುವವರೆಗೆ ವ್ಯವಹಾರವನ್ನು ಸ್ಥಗಿತಗೊಳಿಸಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ವಿನಂತಿಸಿದರು. ಅಂತಿಮವಾಗಿ ಕಿಲ್ಲೆ ಮೈದಾನದಲ್ಲಿ ಬೃಹತ್ ಸಮಾಗಮ ನಡೆಯಲಿದ್ದು, ಅಮೋಘವಾಗಿ ಸಿಂಗರಿಸಲ್ಪಡುವ ಅಮರ್ ಜವಾನ್ ಜ್ಯೋತಿ ಸ್ಮಾರಕದೆದುರು ಭವ್ಯ ವೇದಿಕೆ ಸಿದ್ಧಗೊಳ್ಳಲಿದೆ. ಪುತ್ತೂರಿನ ಇತಿಹಾಸದ ಪುಟಗಳಲ್ಲಿ ಈ ಕಾರ್ಯಕ್ರಮ ದಾಖಲಾಗಲಿದೆ ಎಂದರು.
ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಕಳುಹಿಸಿಕೊಟ್ಟು ದೇಶರಕ್ಷಿಸಿದ ಕದನಕಲಿಗಳನ್ನು ಹತ್ತಿರದಿಂದ ಕಾಣುವುದಕ್ಕೆ ಅನುವು ಮಾಡಿಕೊಡಬೇಕಾಗಿ ವಿನಂತಿಸಿದರು.
ಭಾಷಣ ಹಾಗೂ ದೇಶಭಕ್ತಿಗೀತೆ ಸ್ಪರ್ಧೆ: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಶಾಲಾ ಶಿಕ್ಷಣ ಇಲಾಖೆ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಜಂಟಿಯಾಗಿ ದಕ್ಷಿಣ ಕನ್ನಡ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಗಳನ್ನು ಆಯೋಜನೆ ಮಾಡಿವೆ. ಎರಡೂ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ರೂಪಾಯಿ ಐದು ಸಾವಿರ ಹಾಗೂ ದ್ವಿತೀಯ ಬಹುಮಾನ ರೂಪಾಯಿ ಮೂರು ಸಾವಿರವನ್ನು ನೀಡಲಾಗುತ್ತದೆ. ಭಾಷಣ ಸ್ಪರ್ಧೆಗೆ ಭಾರತೀಯ ಸೈನ್ಯ – ಸಾಧನೆ ಹಾಗೂ ಸಾಮರ್ಥ್ಯ ಎಂಬ ವಿಷಯವನ್ನು ನೀಡಲಾಗಿದೆ. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಯಾವುದೇ ನೋಂದಾವಣೆ ಶುಲ್ಕ ಇರುವುದಿಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪೂರ್ವ ಸೈನಿಕ ಸಂಘದ ಅಧ್ಯಕ್ಷ ಎಂ. ಕೆ. ನಾರಾಯಣ ಭಟ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ, ಸೈನಿಕ ಭವನ ಟ್ರಸ್ಟ್ ಅಧ್ಯಕ್ಷ ಜೋ ಡಿಸೋಜ ಉಪಸ್ಥಿತರಿದ್ದರು.