ಪುತ್ತೂರು: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಆಶ್ರಯದಲ್ಲಿ ವಿಶೇಷ ಮೌಲ್ಯಗಳುಳ್ಳ ಔಷಧೀಯ ಸಸ್ಯಗಳು, ಹಣ್ಣು-ಹಂಪಲುಗಳ ಗಿಡಗಳು ಹಾಗೂ ಇತರ ಗಿಡ-ಮರಗಳನ್ನು ನೆಟ್ಟು ಇಳೆಯನ್ನು ಸಸ್ಯ ಶ್ಯಾಮಲೆಯಾಗಿಸುವ ವಿವೇಕ ಸಂಜೀವಿನಿ ಹಸಿರು ಆವರಣ ಅಭಿಯಾನವನ್ನು ನಡೆಸಲಾಗುತ್ತಿದ್ದು, ಜು.15 ರಂದು ವಿವೇಕಾನಂದ ಪ್ರವೇಶ ದ್ವಾರದ ಬಳಿ ಚಾಲನೆ ನೀಡಲಾಗುವುದು.
ಕಳೆದ ವರ್ಷ ವಿವೇಕ ಸಂಜೀವಿನಿ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಔಷಧೀಯ ಸಸ್ಯಗಳ ಪರಿಚಯ ಪ್ರಾತ್ಯಕ್ಷಿಯನ್ನು ನಡೆಸಲಾಗಿದ್ದು ವಿದ್ಯಾರ್ಥಿಗಳ ಮೂಲಕ ಸಹಸ್ರಾರು ಔಷಧೀಯ ಗುಣಗಳುಳ್ಳ ಗಿಡಗಳನ್ನು ನಾಟಿ ಮಾಡಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಈ ವರ್ಷ ವಿದ್ಯಾವರ್ಧಕ ಸಂಘದ ಒಡೆತನದಲ್ಲಿರುವ ಖಾಲಿ ಸ್ಥಳಗಳಲ್ಲಿ, ವಿವಿಧ ವಿದ್ಯಾಸಂಸ್ಥೆಗಳ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಹಸಿರು ಆವರಣವನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸಂಸ್ಥೆಗಳ ಸಿಬ್ಬಂದಿಗಳು, ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ಇತರ ವಿದ್ಯಾರ್ಥಿ ಸ್ವಯಂಸೇವಕರ ನೆರವಿನೊಂದಿಗೆ ಸುಮಾರು 4 ಸಾವಿರ ಗಿಡಗಳನ್ನು ನೆಡುವುದಕ್ಕೆ ಸಿದ್ದತೆ ಮಾಡಲಾಗಿದೆ.
ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಎ.ವಿ.ನಾರಾಯಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕ ಡಾ.ದೇವಿಪ್ರಸಾದ್.ಕೆ.ಎನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ತಿಳಿಸಿದ್ದಾರೆ.