ಪುತ್ತೂರು: ಬನ್ನೂರಿನಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡರಿಗೆ ಅಭಿನಂದನೆ ಸಲ್ಲಿಸಿ, ಸನ್ಮಾನ ಮಾಡಲಾಯಿತು.
ಅವರು ರಾಮನಗರ ಜಿಲ್ಲೆಗೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿದ ಹಿನ್ನಲೆಯಲ್ಲಿ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಶಾಲಾ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಕಾರ್ಯದರ್ಶಿ ಗುಡ್ಡಪ್ಪ ಗೌಡ ಅಭಿನಂದನಾ ಭಾಷಣ ಮಾಡಿ, ಸುಂದರ ಗೌಡ ಅವರ ಪ್ರಾಮಾಣಿಕತೆ, ಕಾರ್ಯ ತತ್ಪರತೆ ಇಲಾಖೆ ಹಾಗೂ ಶಿಕ್ಷಕರ ಬಗ್ಗೆ ಅವರಿಗಿದ್ದ ಆತ್ಮೀಯತೆ, ಸ್ನೇಹಪರತೆ ಇತ್ಯಾದಿಗಳನ್ನು ಕೊಂಡಾಡಿದರು. ಸುಂದರ ಗೌಡ ಅವರು ಇಲಾಖೆಯ ಆಮೂಲಾಗ್ರ ಮಾಹಿತಿ ಉಳ್ಳವರಾಗಿದ್ದು ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಅತ್ಯಂತ ಯಶಸ್ವಿಯಾಗಿ ಅನೇಕ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುತ್ತಾರೆ. ಅವರ ಸೇವಾ ನಿಷ್ಠೆಯ ಕಾರಣದಿಂದ ಈಗ ಅವರು ಜಿಲ್ಲಾಮಟ್ಟದ ಅಧಿಕಾರಿಯಾಗಿ ಪದೋನ್ನತಿ ಹೊಂದುತ್ತಿರುವುದು ಅತ್ಯಂತ ಅಭಿನಂದನೀಯ ಎಂದು ಹೇಳಿದರು
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಸುಂದರ ಗೌಡರು ಮಾತನಾಡಿ, ಯಾವುದೇ ಪದವಿಗಿಂತಲೂ ಪ್ರೀತಿ, ವಿಶ್ವಾಸದ ಕೊಡುಗೆ ಬಲು ಮೌಲ್ಯಯುತವಾದದ್ದು. ಅಂತಹಾ ಒಂದು ಪ್ರಿತಿಯ ಸಿಂಚನ ಇಂದು ಎವಿಜಿ ಶಾಲೆಯಲ್ಲಿ ಆಗಿದೆ. ಇದಕ್ಕಾಗಿ ನಾನು ಸದಾ ಚಿರ ಋಣಿ ಎಂದರು.
ಸಂಸ್ಥೆಯ ನಿರ್ದೇಶಕರಾದ ಗಂಗಾಧರ ಗೌಡ, ಪುಷ್ಪಾವತಿ ಕಳುವಾಜೆ, ವನಿತಾ ಎ. ವಿ, ಶಿಕ್ಷಕ ವೃಂದ ಹಾಗೂ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಹರ್ಷಿತಾ ರವರು ಪ್ರಾರ್ಥಿಸಿ, ನಿರ್ದೇಶಕರಾದ ವನಿತಾ ಎ. ವಿ. ಸ್ವಾಗತಿಸಿದರು. ಶಾಲಾ ಶಿಕ್ಷಕಿ ಯಶುಭ ರೈ ರವರು ವಂದಿಸಿದರು. ರಾಧ ಕಾರ್ಯಕ್ರಮ ನಿರೂಪಿಸಿದರು.