ಬೆಂಗಳೂರು : ನಿನ್ನೆ ರಾತ್ರಿ ನಿಧನರಾದ ಕನ್ನಡದ ನಿರೂಪಕಿ, ನಟಿ ಅಪರ್ಣಾ ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಪೊಲೀಸ್ ಗೌರವದೊಂದಿಗೆ ನೆರವೇರಿತು.
2 ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಪರ್ಣಾ ನಿನ್ನೆ ರಾತ್ರಿ ಬನಶಂಕರಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ 3 ದಶಕಗಳಿಂದ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ನಟಿಗೆ ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸುವ ಮೂಲಕ ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿದೆ.
ಸೃಜನ್ ಲೋಕೇಶ್ ಸೇರಿದಂತೆ ಅನೇಕರು ಅಪರ್ಣಾ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಮೂರು ದಶಕ ಕನ್ನಡದ ಯಶಸ್ವಿ ನಿರೂಪಕಿಯಾಗಿ ಜನಪ್ರಿಯರಾಗಿದ್ದರು. ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಪರ್ಣಾ, 2013ರಲ್ಲಿ ಬಿಗ್ಬಾಸ್ ಕನ್ನಡದ ಮೊದಲ ಸೀಸನ್ನಲ್ಲಿ ಭಾಗವಹಿಸಿದ್ದರು. 2015ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಕನ್ನಡ ಕಲಾಪ್ರಿಯರ ಮನಗೆದ್ದಿದ್ದರು. 2014ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆಗೆ ಧ್ವನಿ ಗೂಡಿಸಿದ್ದರು.