ಪುತ್ತೂರು: ಬದಲಾವಣೆ ನಮ್ಮ ಕೌಶಲ್ಯಗಳನ್ನು ಹೆಚ್ಚಿಸಲು, ಹೊಸ ಮತ್ತು ನಮ್ಮ ಅಭ್ಯಾಸಗಳನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ. ಬದಲಾವಣೆಗೆ ಧನಾತ್ಮಕವಾಗಿ ಸ್ಪಂದಿಸುವ ಮೂಲಕ ನಾವು ನಿರಂತರ ಸುಧಾರಣೆಯ ಸಂಸ್ಕೃತಿಯನ್ನು ಬೆಳೆಸಬಹುದು. ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮತ್ತು ಪ್ರತಿಕ್ರಿಯೆಯನ್ನು ರಚನಾತ್ಮಕವಾಗಿ ಸ್ವಾಗತಿಸುವ ವಾತಾವರಣವನ್ನು ನಾವು ಬೆಳೆಸಬೇಕಾಗಿದೆ. ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು.

ಅವರು “ಅಂಗ ಸಂಸ್ಥೆಯಿಂದ ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತನೆಗೆ ತಯಾರಿ” ಫ್ಯಾಕಲ್ಟಿ ಡೆವಲಪ್ ಮೆಂಟ್ ಸರಣಿ ಕಾರ್ಯಕ್ರಮದ ದ್ವಿತೀಯ ಹಂತದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನ್ಯಾಸಕಿ ಗೀತಾ ಪೂರ್ಣಿಮಾ ಕೆ ಸ್ವಾಯತ್ತ ಕಾಲೇಜಿನ ಆಡಳಿತ ಮತ್ತು ಶೈಕ್ಷಣಿಕ ವಿಭಾಗಗಳ ವ್ಯಾಪ್ತಿ ಮತ್ತು ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕ ಅಭಿಷೇಕ್ ಸುವರ್ಣ ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ವಿಭಾಗದ ಕಾರ್ಯವ್ಯಾಪ್ತಿ ಹಾಗೂ ಜವಾಬ್ದಾರಿಗಳ ಬಗ್ಗೆ ವಿವರಣೆ ನೀಡಿದರು. ಸಹಾಯಕ ಪ್ರಾಧ್ಯಾಪಕ ಡಾ. ಎಡ್ವಿನ್ ಡಿಸೋಜರವರು ಸ್ವಾಯತ್ತ ಕಾಲೇಜಿನ ಹಣಕಾಸು ವಿಭಾಗದ ವ್ಯಾಪ್ತಿ, ಜವಾಬ್ದಾರಿಗಳು ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ವಿನಯಚಂದ್ರ ಮಾಡರೇಟರ್ ಆಗಿ ಕರ್ತವ್ಯ ನಿರ್ವಹಿಸಿದರು.
ಸ್ಟಾಫ್ ಡೆವಲಪ್ ಮೆಂಟ್ ಆ್ಯಂಡ್ ಅಪ್ರೈಸಲ್ ಸೆಲ್ ನ ಸಂಯೋಜಕ ಡಾ. ಎಡ್ವಿನ್ ಡಿಸೋಜ ಸ್ವಾಗತಿಸಿದರು. ಉಪನ್ಯಾಸಕಿ ಸುರಕ್ಷಾ ಎಸ್. ವಂದಿಸಿದರು. ಉಪಪ್ರಾಂಶುಪಾಲ ಡಾ. ವಿಜಯ ಕುಮಾರ್ ಮೊಳೆಯಾರ್ ಉಪಸ್ಥಿತರಿದ್ದರು.