ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಯತ್ನ ಮಾಡಿರುವ ಆರೋಪದ ಬೆನ್ನಲ್ಲೇ ಕಾಣೆಯಾಗಿದ್ದ ನಿರೂಪಕಿ ದಿವ್ಯ ವಸಂತ ಬಂಧನವಾಗಿದೆ.
ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.
ದಿವ್ಯ ವಸಂತ ಮತ್ತು ಗ್ಯಾಂಗ್ ನಿಂದ ಇಂದಿರಾನಗರದಲ್ಲಿರುವ ಸ್ಪಾ ಮಾಲೀಕನಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಯತ್ನ ಪ್ರಕರಣ ಇದಾಗಿದ್ದು, ಈ ಕೇಸ್ ನಲ್ಲಿ ತಮ್ಮನ ಬಂಧನ ನಂತರ ಪರಾರಿಯಾಗಿ ತಲೆಮರೆಸಿಕೊಂಡಿದ್ದ ದಿವ್ಯ ವಸಂತ ಕೇರಳದಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಒಂದು ವಾರದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ದಿವ್ಯ ತಮಿಳುನಾಡಿನಿಂದ ಕೇರಳದಲ್ಲಿ ತಲೆ ಮರೆಸಿಕೊಂಡಿದ್ದಳು. ಸದ್ಯ ಕೇರಳದಿಂದ ಬಂಧಿಸಿ ಕರೆತಂದಿರುವ ಜೀವನ್ ಭೀಮಾನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇಂದಿರಾನಗರ ‘ಸ್ಪಾ’ ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರೂ. ಹಣ ಸುಲಿಗೆಗೆ ಯತ್ನಿಸಿದ ಪ್ರಕರಣ ಸಂಬಂಧ ರಾಜ್ ನ್ಯೂಸ್ ಕಾರ್ಯನಿರ್ವಾಹಕ ರಾಜಾನುಕುಂಟೆ ವೆಂಕಟೇಶ್, ದಿವ್ಯ ತಮ್ಮ ಸಂದೇಶ್ ಸೇರಿ ಮೂವರನ್ನು ಈಗಾಗಲೇ ಬಂಧಿಸಿದ್ದಾರೆ.
ಸುಲಿಗೆ ಕೃತ್ಯಗಳಿಗೆ ವಾಟ್ಸ್ ಆಪ್ ನಲ್ಲಿ ‘ಸೈ ರಿಸರ್ಚ್ ಟೀಂ’ ಹೆಸರಿನ ಗ್ರೂಪ್ ಅನ್ನು ವೆಂಕಟೇಶ್ ಹಾಗೂ ದಿವ್ಯಾ ಮಾಡಿಕೊಂಡಿದ್ದರು. ಈ ಗ್ರೂಪ್ ನಲ್ಲಿ ತಮ್ಮ ಕಾರ್ಯಸೂಚಿಗಳ ಬಗ್ಗೆ ಆರೋಪಿಗಳು ಚರ್ಚಿಸುತ್ತಿದ್ದರು. ಈ ಪ್ರಕರಣ ಹೊರ ಬರುತ್ತಿದ್ದಂತೆಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂತು. ಇಂದಿರಾ ನಗರದ 80 ಅಡಿ ರಸ್ತೆಯ ಮೈಕಲ್ ಪಾಳ್ಯ ಸಮೀಪದ ಸಹರಾ ಇಂಟರ್ ನ್ಯಾಷನಲ್ ಸ್ಪಾ ದ ವ್ಯವಸ್ಥಾಪಕ ಮಹೇಶ್ ಶೆಟ್ಟಿಗೆ ಬೆದರಿಸಿ 1 ಲಕ್ಷ ರೂ. ಸುಲಿಗೆ ಮಾಡಿದ್ದು, ಈ ಬಗ್ಗೆ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ರಾಜ್ ನ್ಯೂಸ್ ಸಿಇಒ ವೆಂಕಟೇಶ್ ಹಾಗೂ ಇತರರ ವಿರುದ್ಧ ಇಂದಿರಾನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಎರಡೂ ಪ್ರಕರಣಗಳು ಇಂದಿರಾಗರದಲ್ಲಿ ನಡೆದಿದೆ.