ಸುಳ್ಯ: ಸುಳ್ಯದ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯರ ಸಮಸ್ಯೆ, ಜಲ್ ಜೀವನ್ ಮಿಷನ್ ಯೋಜನೆಯಡಿ ನಡೆದಿರುವ ಕಾಮಗಾರಿ, ಸುಳ್ಯದ ಅಂಬೇಡ್ಕರ್ ಭವನದ ಕಾಮಗಾರಿಯ ವಿಳಂಬ ಹೀಗೆ ಹಲವು ಬಾಕಿ ಉಳಿದಿರುವ ಕಾಮಗಾರಿ ಹಾಗೂ ಕ್ರಮಗಳನ್ನು ಆದಷ್ಟು ಬೇಗ ನಡೆಸಿಕೊಡಬೇಕೆಂದು ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧಿಕಾರಿಗಳಿಗೆ ತಿಳಿಸಿ ಡೆಡ್ ಲೈನ್ ನೀಡಿದರು.
ಸಂಸದರು ಇಂದು ಸುಳ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಸುಳ್ಯದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಮಾರ್ಗದರ್ಶನವನ್ನೂ ನೀಡಿದರು.
ಪ್ರಗತಿ ಪರಿಶೀಲನಾ ಸಭೆಯ ನಡವಳಿಗೆ ಪಾಲನ ವರದಿಯನ್ನು ಸಂಸದರು ಆಲಿಸಿ ಅಧಿಕಾರಿಗಳು ಪ್ರಪ್ರಥಮವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕೆಂದು ಸೂಚಿಸಿದರು. ಸಮಸ್ಯೆಗಳ ಸ್ಪಂದನೆಗೆ ಅಧಿಕಾರಿಗಳು ಯಾವ ರೀತಿ ತಯಾರಿ ನಡೆಸಬೇಕೆಂಬ ಬಗ್ಗೆ ಮಾಹಿತಿ ನೀಡಿ ಈ ಕಾರ್ಯಕ್ರಮಕ್ಕೆ ಭಾಗವಹಿಸಲು ಬೇರೆ ಕಾರ್ಯಕ್ರಮಕ್ಕೆ ಬಂದ ಕಾರಣ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕೆಡಿಪಿ ಸಭೆಗಳಲ್ಲಿ ಭಾಗವಹಿಸಿ ಸಂಪೂರ್ಣ ಮಾಹಿತಿ ಪಡೆಯುವುದಾಗಿ ತಿಳಿಸಿದರು.
ಡೆಂಗ್ಯೂ ವಿಷಯದ ಬಗ್ಗೆ ಚರ್ಚೆ ನಡೆದಿದ್ದು ಇದನ್ನು ಕೇವಲ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಬಿಟ್ಟುಕೊಡದೆ ಎಲ್ಲಾ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಗ್ರಾಮಮಟ್ಟದಲ್ಲಿ ಜನಜಾಗೃತಿ ಗೊಳಿಸುವ ಮತ್ತು ಗ್ರಾಮಗಳಿಂದ ರೋಗಿಗಳ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸ ಕಾರ್ಯಗಳು ಆಗಬೇಕೆಂದು ಸೂಚಿಸಿದರು. ಜ್ವರದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡಲು ಹಾಗೂ ಜನರಿಗೆ ತ್ವರಿತ ನೆರವು ಪಡೆಯುವ ನಿಟ್ಟಿನಲ್ಲಿ ಕಾಲ್ ಸೆಂಟರ್ ತೆರೆಯಬೇಕು ಎಂದು ಸಂಸದರು ಹಾಗೂ ಸ್ಥಳೀಯ ಶಾಸಕರಾದ ಭಾಗೀರಥಿ ಮುರುಳ್ಯ ಸೂಚಿಸಿದರು.
ಮೊದಲಿಗೆ ತಾಲೂಕಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಸಂಸದರು ಪಾಲ್ಗೊಂಡು ಮಾತನಾಡಿ, ಪತ್ರಕರ್ತರು ಪ್ರಜಾಪ್ರಭುತ್ವದ ಎಲ್ಲಾ ಅಂಗಗಳಿಗೆ ಕನ್ನಡಿ ಹಿಡಿದು ಸರಿ ತಪ್ಪುಗಳನ್ನು ಎತ್ತಿ ತೋರಿಸಿ ಸಮಾಜವನ್ನು ತಿದ್ದುವ ಕಾರ್ಯದಲ್ಲಿ ತೊಡಗಿಕೊಂಡಿರುವ ಪತ್ರಿಕೆಗಳು ವರದಿ ಪ್ರಕಟಿಸುವ ವೇಳೆ ಸತ್ಯಧರ್ಮ, ನ್ಯಾಯದ ಅನಾವರಣವಾಗುವಂತಾಗಬೇಕು ಎಂದರು.