ಮಂಗಳೂರು : ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಚಡ್ಡಿ ಗ್ಯಾಂಗ್ ಸದಸ್ಯರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮಧ್ಯಪ್ರದೇಶದ ಗುಣಾ ಜಿಲ್ಲೆಯ ರಾಜು ಸಿಂಗ್ಲಾನಿಯಾ (24), ಭೂಪಾಲ್ ನ ಮಯೂರ್ (30), ಬಾಲಿ (22), ಗುಣಾ ಜಿಲ್ಲೆಯ ವಿಕ್ಕಿ (21) ನಾಲ್ವರು ಬಂಧಿತ ಆರೋಪಿಗಳು.
ಕಾರ್ಯಾಚರಣೆ ನಡೆಸಿದ್ದ ಪೊಲೀಸರು ನಿನ್ನೆ ಚಡ್ಡಿ ಗ್ಯಾಂಗ್ ನ ನಾಲ್ವರನ್ನು ಸಕಲೇಶಪುರದಲ್ಲಿ ಬಂಧಿಸಿ ಮಂಗಳೂರಿಗೆ ಕರೆ ತಂದಿದ್ದರು.
ದರೋಡೆ ನಡೆಸಿದ ಬಳಿಕ ಅದೇ ಮನೆಯ ಕಾರಿನಲ್ಲಿ ಮುಲ್ಕಿವರೆಗೆ ಬಂದು ಕಾರನ್ನು ಅಲ್ಲಿ ಬಿಟ್ಟು ಬೆಂಗಳೂರು ಕಡೆಗೆ ಬಸ್ ನಲ್ಲಿ ಹೊರಟಿದ್ದರು. ಅದರಂತೆ ಕಾರು ಇಟ್ಟ ಸ್ಥಳಕ್ಕೆ ಇಂದು ಬೆಳಗ್ಗೆ ಸ್ಥಳ ಮಹಜರಿಗಾಗಿ ಪೊಲೀಸರು ಆರೋಪಿಗಳನ್ನು ಕರೆ ತಂದಿದ್ದರು. ಈ ವೇಳೆ ಇಬ್ಬರು ಪೊಲೀಸರ ಮೇಲೆ ಕೂಡ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆತ್ಮ ರಕ್ಷಣೆಗಾಗಿ ಪೊಲೀಸರು ಆರೋಪಿಗಳಾದ ರಾಜು ಸಿಂಗ್ಲಾನಿಯಾ ಮತ್ತು ಬಾಲಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.