ಪುತ್ತೂರು: ಮಂಗಳೂರು ಕೃಷಿಕರ ಸಹಕಾರಿ ಸಂಘದ ವತಿಯಿಂದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಸಹಕಾರದಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ಕಾವು ಕೃಷಿ ಪತ್ತಿನ ಸಹಕಾರ ಸಂಘದ ವಠಾರದಲ್ಲಿ ಮಂಗಳವಾರ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಸಮಾರಂಭ ಉದ್ಘಾಟಿಸಿ, ಅಡಿಕೆ ಸಂಶೋಧನಾ ಕೇಂದ್ರ ಅಡಿಕೆ ಕುರಿತು ಸರಿಯಾದ ಗಮನ ಹರಿಸದೆ ಇರುವುದೇ ಅಡಿಕೆಗೆ ಹೆಚ್ಚಿನ ಬೆಲೆ, ಅನುದಾನ ಪಡೆಯುವಲ್ಲಿ ಹಿಂದೆ ಬಿದ್ದಿದೆ. ಈ ನಿಟ್ಟಿನಲ್ಲಿ ಅಡಿಕೆ ಸಂಶೋಧನಾ ಕೇಂದ್ರಗಳು ಅಡಿಕೆಯ ಬಳಕೆಯಲ್ಲಿ ವಿವಿಧ ರೀತಿಯ ಪರ್ಯಾಯ ವ್ಯವಸ್ಥೆ ಜತೆಗೆ ಅಡಿಕೆಗೆ ಬರುವ ರೋಗ ಮುಕ್ತವಾಗುವ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳನ್ನು ಮಾಡುವ ಅಗತ್ಯವಿದೆ ಎಂದರು.
ದ.ಕ.ಜಿಲ್ಲೆಯಲ್ಲಿ ಅಡಿಕೆ ಬೆಳೆ ಆಧಾರಸ್ತಂಭವಾಗಿದೆ. ರೈತರು ಬೆಳೆದ ಅಡಿಕೆಗೆ ನ್ಯಾಯಯುತ ಬೆಲೆ ನೀಡುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಕೃಷಿ ಕಾರ್ಯಕ್ಕೆ ಕಾರ್ಮಿಕರ ಕೊರತೆ ಇರುವ ಈ ಸಂದರ್ಭದಲ್ಲಿ ಯುವಕರಿಗೆ ಅಡಿಕೆ ಮರ ಹತ್ತುವುದು, ಔಷಧಿ ಸಿಂಪಡಿಸುವ ಕುರಿತು ತರಬೇತಿ ನೀಡುವ ಅಗತ್ಯವಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಒಂದು ಸಂಸ್ಥೆ ಬೆಳೆಯಲು ಹೇಗೆ ನಾಯಕತ್ವ ಗುಣದ ಅವಶ್ಯಕತೆಯಿದೆ ಎಂಬುದನ್ನು ಮಾಸ್ ನ ಅಧ್ಯಕ್ಷರಾಗಿ ಸವಣೂರು ಸೀತಾರಾಮ ರೈ ತೋರಿಸಿಕೊಟ್ಟಿದ್ದಾರೆ. ಇದೀಗ ಮಾಸ್ ನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಡಿಕೆ ಖರೀದಿ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಕಾವು ಭಾಗದ ರೈತಾಪಿ ವರ್ಗ ಸಂಸ್ಥೆ ಬೆಳೆಯುವಲ್ಲಿ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ ಬಳೆಜ್ಜ, ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ, ಶುಭ ಹಾರೈಸಿದರು.
ಕಾವು ಸಿ.ಎ. ಬ್ಯಾಂಕ್ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಮಾಸ್ ನ ಅಧ್ಯಕ್ಷ ಸ್ಥಾನ ಪಡೆದುಕೊಂಡಿರುವ ಸೀತಾರಾಮ ರೈ ಸವಣೂರು ಅವರು ಮಾಸ್ ಸಂಸ್ಥೆಯ ಅಭಿವೃದ್ಧಿ ಜತೆ ರೈತರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಭಾವನಾತ್ಮಕವಾಗಿ, ಪಾರದರ್ಶಕವಾಗಿ, ಸಮಯ ಪಾಲನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇದೀಗ ಇಲ್ಲಿ ಉದ್ಘಾಟನೆಗೊಂಡ ಅಡಿಕೆ ಖರೀದಿ ಕೇಂದ್ರವನ್ನು ಬೆಳೆಸಿ, ಉಳಿಸುವ ಕೆಲಸ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮಾಸ್ ಲಿ. ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ. ಮಹಾಬಲೇಶ್ವರ ಭಟ್, ನಿರ್ದೇಶಕರಾದ ಎಂ.ಬಿ.ನಿತ್ಯಾನಂದ ಮುಂಡೋಡಿ, ಬೆಳ್ಳೆ ಶಿವಾಜಿ ಎಸ್.ಸುವರ್ಣ, ಸುಧಾ ಎಸ್.ರೈ ಪುಣ್ಚಪ್ಪಾಡಿ, ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಪುಷ್ಪರಾಜ್ ಅಡ್ಯಂತಾಯ ಉಪಸ್ಥಿತರಿದ್ದರು.
ಮಾಸ್ ಲಿ. ಅಧ್ಯಕ್ಷ ಸವಣೂರು ಸೀತಾರಾಮ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾವು ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ವಂದಿಸಿದರು. ಸಿಬ್ಬಂದಿ ಸುನೀಲ್ ಕಾವು, ಸವಣೂರು ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಾಸ್ ಲಿ. ಅಧ್ಯಕ್ಷ ಸವಣೂರು ಸೀತಾರಾಮ ರೈ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಅಡಿಕೆ ಕೇಂದ್ರಕ್ಕೆ ಪ್ರಥಮವಾಗಿ ಅಡಿಕೆ ಮಾರಾಟ ಮಾಡಿದ ಶ್ರೀಪತಿ ಮೂಡೆತ್ತಾಯ ಅವರಿಗೆ ಖರೀದಿ ಬಿಲ್ಲಿನ ಹಣವನ್ನು ನೀಡಲಾಯಿತು.