ಪುತ್ತೂರು: ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ಪ್ರಾರಂಭಗೊಂಡ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ವಿಟ್ಲ ಎಂಪೈರ್ ಮಹಲ್ ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2002ರಲ್ಲಿ ಶ್ರೀ ಮಹಾಲಿಂಗೇಶ್ವರ ಸಭಾ ಭವನದ ಕಟ್ಟಡದಲ್ಲಿ ಪ್ರಾರಂಭಗೊಂಡ ಸಹಕಾರ ಸಂಘವು ಪುತ್ತೂರು ಎ.ಪಿ.ಎಂ.ಸಿ ಶಾಖೆ, ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು ಪುತ್ತೂರು ಎಸ್.ಎಂ.ಟಿ ಶಾಖೆ, ಕಾಣಿಯೂರು ಮತ್ತು ಬೆಳ್ಳಾರೆ ಶಾಖೆಗಳಲ್ಲಿ ಸುಮಾರು 8,000ಕ್ಕಿಂತಲೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಕಳೆದ ಅವಧಿಯಲ್ಲಿ 542 ಕೋಟಿಗಿಂತಲೂ ಮಿಕ್ಕಿ ವ್ಯವಹಾರಗಳನ್ನು ಮಾಡಿದೆ. 4.6 ಕೋಟಿಗಿಂತ ಮಿಕ್ಕಿ ಪಾಲು ಬಂಡವಾಳವನ್ನು ಹೊಂದಿದೆ. ಕಳೆದ ಅವಧಿಯಲ್ಲಿ ಸುಮಾರು ರೂ. 1.50 ಕೋಟಿಗಿಂತಲೂ ಮಿಕ್ಕಿ ಲಾಭ ಪಡಕೊಂಡಿದೆ. ಕಳೆದ ಅವಧಿಯಲ್ಲಿ 103 ಕೋಟಿಗಿಂತ ಮಿಕ್ಕಿ ಠೇವಣೆ ಹೊಂದಿದ್ದು, 99 ಕೋಟಿಗಿಂತ ಮಿಕ್ಕಿ ಹೊರಬಾಕಿ ಸಾಲ ಇರುತ್ತದೆ ಎಂದು ತಿಳಿಸಿದರು.
2002ರಲ್ಲಿ ಇಡ್ಯಡ್ಕ ಮೋಹನ್ ಗೌಡರ ನೇತೃತ್ವದಲ್ಲಿ ಸುಮಾರು 20 ಸಮಾನ ಮನಸ್ಕರ ತಂಡ ಪ್ರವರ್ತಕರಾಗಿ ಈ ಸಂಸ್ಥೆಯನ್ನು ಪ್ರಾರಂಭಿಸಿದರು. ಸ್ಥಾಪಕ ಅಧ್ಯಕ್ಷರಾಗಿ ದಿ| ಜಗನ್ನಾಥ ಬೊಮ್ಮೆಟ್ಟಿ, ಉಪಾಧ್ಯಕ್ಷರಾಗಿ ಜೆ.ಕೆ ವಸಂತ ಗೌಡ ಸೇವೆ ಸಲ್ಲಿಸಿದ್ದು, ನಂತರದ ದಿನಗಳಲ್ಲಿ ರಾಮಕೃಷ್ಣ ಕರ್ಮಲ ರವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಚಿದಾನಂದ ಬೈಲಾಡಿ ಇವರು ಅಧ್ಯಕ್ಷರಾಗಿ, ಯು.ಪಿ ರಾಮಕೃಷ್ಣ ಉಪಾಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ಮೋಹನ್ ಗೌಡ ಇಡ್ಯಡ್ಕ, ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸತೀಶ್ ಪಾಂಬಾರು, ಪ್ರವೀಣ್ ಕುಂಟ್ಯಾನ, ಲೋಕೇಶ್ ಚಾಕೋಟೆ, ಸಂಜೀವ ಕುದ್ದೂರು, ಸುದರ್ಶನ ಗೌಡ ಕೋಡಿಂಬಾಳ, ತೇಜಸ್ವಿನಿ ಶೇಖರ ಗೌಡ ಕಟ್ಟಪುಣಿ, ಸುಪ್ರೀತಾ ರವಿಚಂದ್ರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸುಧಾಕರ ಕೆ. ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಧಾನ ಕಚೇರಿ ಮತ್ತು ಪುತ್ತೂರು ಶಾಖೆಯ ಎ.ಪಿ.ಎಂ.ಸಿ ರಸ್ತೆ, ಮಣಾಯಿ ಆರ್ಚ್ ಸಂಕೀರ್ಣದಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಾ ಇದೆ. ಸದ್ರಿ ಸಹಕಾರಿ ಸಂಘದಲ್ಲಿ ಆಸ್ತಿ ಖರೀದಿ, ಆಸ್ತಿ ಅಡವು, ಮನೆ ನಿರ್ಮಾಣ, ವಾಹನ ಸಾಲ, ಠೇವಣಿ ಸಾಲ, ಜಾಮೀನು ಸಾಲ, ವ್ಯಾಪಾರ ಸಾಲ, ಚಿನ್ನಾಭರಣ ಅಡವು, ವೇತನ ಆಧಾರಿತ ಸಾಲ ಹೀಗೆ ವಿವಿಧ ರೀತಿಯ ಸಾಲಗಳನ್ನು ಆಕರ್ಷಕ ಬಡ್ಡಿಯಲ್ಲಿ ನೀಡಲಾಗುತ್ತಿದ್ದು, ಠೇವಣಿಗಳಿಗೆ ಕೂಡಾ ಆಕರ್ಷಕ ಬಡ್ಡಿಯನ್ನು ನೀಡಲಾಗುತ್ತಿದೆ. 2015 ರಿಂದ ಅಡಿಟ್ ವರದಿಯಲ್ಲಿ ನಿರಂತರವಾಗಿ ‘ಎ’ ತರಗತಿಯನ್ನೇ ಪಡೆಯುತ್ತಾ ಬಂದಿದೆ. ಸತತ 2 ಬಾರಿ ಸಂಘದ ಉತ್ತಮ ವ್ಯವಹಾರಕ್ಕಾಗಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನಿಂದ ಕೊಡಲ್ಪಡುವ ಸಾಧನಾ ಪ್ರಶಸ್ತಿಯನ್ನು ಪಡೆದಿದೆ.
ಜು. 13 ರಂದು 10ನೇ ಶಾಖೆ ವಿಟ್ಲ ಶಾಖೆಯ ಉದ್ಘಾಟನೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಕಾವೂರು ಶಾಖೆಯ ಪರಮಪೂಜ್ಯ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಸಹಕಾರಿ ಸಂಘಗಳ ಉಪನಿಬಂಧಕ ಹೆಚ್.ಎನ್. ರಮೇಶ್, ವಿಟ್ಲ ಪಂಚಾಯತ್ ಸದಸ್ಯ ಜಯಂತ ಪಿ.ಹೆಚ್., ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಅಧ್ಯಕ್ಷ ರವಿ ಮುಂಗ್ಲಿಮನೆ, ಬಂಟ್ವಾಳ ತಾಲೂಕು, ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲದ ಅಧ್ಯಕ್ಷ ಕೆ. ಮೋನಪ್ಪ ಗೌಡ ಶಿವಾಜಿನಗರ, ವಿಟ್ಲ ಎಂಪೈರ್ ಮಹಲ್‌ನ ಮಾಲಕ ಪೀಟರ್ ಪ್ರಾನ್ಸಿಸ್ ಲಾಸ್ರಾದೋ, ಮುಂತಾದ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಯು ಪಿ ರಾಮಕೃಷ್ಣ, ನಿರ್ದೇಶಕ, ವಿಟ್ಲ ಶಾಖೆ ಸಲಹಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಕರ್ಮಲ, ನಿರ್ದೇಶಕ, ವಿಟ್ಲ ಶಾಖೆ ಸಲಹಾ ಸಮಿತಿ ಉಪಾಧ್ಯಕ್ಷ ಜಿನ್ನಪ್ಪ ಗೌಡ ಮಳುವೇಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ. ಉಪಸ್ಥಿತರಿದ್ದರು.