ಉಪ್ಪಿನಂಗಡಿ: ಯಕ್ಷಗಾನ ವೇಷಧಾರಿಯಾಗಿ, ಅರ್ಥಧಾರಿಯಾಗಿ ಕುಂಬ್ಳೆ ಶ್ರೀಧರ ರಾವ್ ನಿರ್ವಹಿಸಿದ ಪಾತ್ರಗಳು ಅತ್ಯಂತ ಪ್ರಬುದ್ಧವಾಗಿದ್ದು ಹಿರಿಯ ಕಲಾವಿದರೊಂದಿಗಿನ ದೀರ್ಘ ಒಡನಾಟದಲ್ಲಿ ಅವರು ಗಳಿಸಿದ ಜ್ಞಾನವನ್ನು ಅಭಿನಯ ಮತ್ತು ಮಾತುಗಲ್ಲಿ ಕೇಳುವ ಅವಕಾಶ ಇನ್ನಿಲ್ಲವೆನ್ನುವ ಕೊರಗು ಕಲಾವಲಯದಲ್ಲಿ ಮೂಡಿದೆ ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ, ಕಲಾವಿದ ವಿದ್ವಾನ್ ಡಾ.ವಿನಾಯಕ ಭಟ್ ಗಾಳಿಮನೆ ಹೇಳಿದರು.
ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ಕುಂಬ್ಳೆ ಶ್ರೀಧರ್ ರಾವ್ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸವ್ಯಸಾಚಿ ಕಲಾವಿದರಾಗಿ ಯಕ್ಷಗಾನದ ಕಿರಿಯ ಕಲಾವಿದರಿಗೆ ಅವರು ನೀಡುತ್ತಿದ್ದ ಮಾರ್ಗದರ್ಶನ ಸದಾ ಸ್ಮರಣೀಯ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಗೋಪಾಲ ಶೆಟ್ಟಿ ಕಳೆಂಜ, ಯಕ್ಷಗಾನ ಕಲಾಪೋಷಕ ಉಮೇಶ ಶೆಣೈ ರಾಮನಗರ, ಪಾರೆಂಕಿ ಮಹಿಷ ಮರ್ಧಿನಿ ಯಕ್ಷಗಾನ ಸಂಘ ಅಧ್ಯಕ್ಷ ಕಿಶೋರ್ ಶೆಟ್ಟಿ ಮೂಡಾಯಿರು, ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಹರೀಶ್ ಆಚಾರ್ಯ ಪುಳಿತ್ತಡಿ, ಮಾಜಿ ಅಧ್ಯಕ್ಷ ಹರೀಶ್ ಮದ್ದಡ್ಕ ಉಪಸ್ಥಿತರಿದ್ದರು.
ಸಂಘದ ಖಜಾಂಜಿ ಹರೀಶ ಆಚಾರ್ಯ ಬಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ ವಂದಿಸಿದರು.
ಮಹಾಭಾರತ ಸರಣಿಯಲ್ಲಿ ಜರಗಿದ ಊರ್ವಶಿ ಶಾಪ ತಾಳಮದ್ದಳೆಯಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್, ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ, ಕಿಶೋರ ಶೆಟ್ಟಿ, ನಿತಿನ್ ಕುಮಾರ್. ವೈ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ, ಅರ್ಥಧಾರಿಗಳಾಗಿ ವಿದ್ವಾನ್ ವಿನಾಯಕ ಭಟ್ ಗಾಳಿಮನೆ, ಶ್ರೀಧರ್ ಎಸ್ಪಿ ಮಂಗಳೂರು(ಅರ್ಜುನ), ದಿವಾಕರ ಆಚಾರ್ಯ ಗೇರುಕಟ್ಟೆ(ಊರ್ವಶಿ), ಜಯರಾಮ ಬಲ್ಯ(ದೇವೇಂದ್ರ), ಸಂಜೀವ ಪಾರೆಂಕಿ(ಮಾತಲಿ), ಹರೀಶ್ ಆಚಾರ್ಯ ಬಾರ್ಯ(ಚಿತ್ರಸೇನ) ಭಾಗವಹಿಸಿದ್ದರು.