ಪುತ್ತೂರು: ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ಕೇಪುಳು-ಸಿದ್ಯಾಳ-ಶಾಂತಿನಗರ ರಸ್ತೆಗೆ ಶಿಲಾನ್ಯಾಸ ಕಾರ್ಯಕ್ರಮ ಹಾಗೂ 6 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆಯ ಉದ್ಘಾಟನೆ ಸೋಮವಾರ ನಡೆಯಿತು.
ಮಾಜಿ ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ನೆರವೇರಿಸಿ, ನಗರಸಭೆಯಲ್ಲಿ ಅಭಿವೃದ್ಧಿ ಶಾಖೆಯನ್ನು ನಾವು ಹಿಂದೆ ಐದು ವರ್ಷದಲ್ಲಿ ಕಂಡಿದ್ದೇವೆ. ಇಡೀ ರಾಜ್ಯದಲ್ಲಿ ಸ್ವಚ್ಛತೆಯಲ್ಲಿ 11 ನೇ ಸ್ಥಾನದಲ್ಲಿದ್ದ ಪುತ್ತೂರನ್ನು 3ನೇ ಸ್ಥಾನ ತಂದು ಕೊಡುವಲ್ಲಿ ನಮ್ಮ ನಗರಸಭೆ ಪೌರ ಕಾರ್ಮಿಕರು ಕೆಲಸ ಮಾಡಿದ್ದಾರೆ. ನಗರಸಭೆಯಲ್ಲಿ ಅಭಿವೃದ್ಧಿ ಜತೆಗೆ ಸ್ವಚ್ಛತೆಗೆ ಗಮನ ಕೊಡುವ ಕೆಲಸ ಆಗಿದೆ. ಮುಂದಿನ 25 ವರ್ಷಗಳ ಕಾಲ ಬಾಳಿಕೆ ಬರುವ ಕ್ವಾಲಿಟಿ ರಸ್ತೆಯನ್ನು ನಿರ್ಮಿಸಿದ್ದೇವೆ. 31 ವಾರ್ಡುಗಳಲ್ಲಿ ಏಕರೀತಿಯ ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂದರು.
ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಹಾಗೂ ಹಿಂದಿನ ಶಾಸಕರ ನೇತೃತ್ವದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯ ಗಳಾಗಿದೆ. ನಗರೋತ್ಥಾನ ಯೋಜನೆಯಲ್ಲಿ ಸುಮಾರು 28 ಕೋಟಿ ಪುತ್ತೂರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ರಸ್ತೆಗಳನ್ನ ಕಾಂಕ್ರಿಟೀಕರಣ ಮಾಡುವ ಕೆಲಸ ಆದ್ಯತೆ ಮೇಲೆ ಆಗಿದೆ. ಫಾಗಿಂಗ್, ಗಿಡಗಂಟಿಗಳ ತೆರವು ಕಾರ್ಯ ಮಾಡುವ ಕುರಿತು ಈಗಾಗಲೇ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಸದಸ್ಯರಾದ ಲೀಲಾವತಿ ಕೃಷ್ಣನಗರ, ಸಂತೋಷ್ ಬೊಳುವಾರು, ಗೌರಿ ಬನ್ನೂರು ಉಪಸ್ಥಿತರಿದ್ದರು. ಜಯಾನಂದ ಕೆ. ಬಂಗೇರ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಸದಸ್ಯ ಸುಂದರ ಪೂಜಾರಿ ಬಡಾವು ವಂದಿಸಿದರು.