ಸವಣೂರು: ಸವಣೂರು ಯುವಕ ಮಂಡಲದ ವತಿಯಿಂದ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ ಭಾನುವಾರ ಸವಣೂರು ಬಸದಿ ವಠಾರದಲ್ಲಿರುವ ನಿರ್ಮಲ್ ಕುಮಾರ್ ಜೈನ್ ಅವರ ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ, ಸಹಕಾರಿ ರತ್ನ ಕೆ.ಸೀತಾರಾಮ ರೈ ಸವಣೂರು ಉದ್ಘಾಟಿಸಿ ಮಾತನಾಡಿ, ಆಟೋಟ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುವುದು ಮುಖ್ಯ ಅಲ್ಲ. ಬದಲಾಗಿ ಭಾಗವಹಿಸುವುದೇ ಮುಖ್ಯ. ಸವಣೂರು ಯುವಕ ಮಂಡಲದ ಒಳ್ಳೆಯ ಕಾರ್ಯಕ್ಕೆ ಪ್ರೋತ್ಸಾಹಿಸಬೇಕು ಎಂದ ಅವರು, ಕೆಸರಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಔಷಧವಿದೆ. ಈ ನಿಟ್ಟಿನಲ್ಲಿ ಕೆಸರುಗದ್ದೆ ಆಟೋಟ ಸ್ಪರ್ಧೆ ಆರೋಗ್ಯಕರ ಎಂದು ಹೇಳಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಸರುಗದ್ದೆ ಆಟೋಟ ಸ್ಪರ್ಧೆ ಮನರಂಜನೆ ನೀಡುವ ಜೊತೆಗೆ ಆರೋಗ್ಯಕರವಾಗಿದೆ. ಗದ್ದೆಯಲ್ಲಿ ಒಂದು ದಿನ ಹೊರಳಾಡುವ ದಿನ. ಮಣ್ಣಿನ ಶಕ್ತಿ ಮೈಗೆ ಅಂಟಿಕೊಂಡಾಗ ಆರೋಗ್ಯ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಹಿರಿಯರು ನಡೆಸಿಕೊಂಡು ಬಂದಿರುವ ಇಂತಹಾ ಆಟೋಟ ಸ್ಪರ್ಧೆಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶತ್ರುಂಜಯ ಆರಿಗ, ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸುಳ್ಯ ಅಕ್ರಮ-ಸಕ್ರಮ ಸಮಿತಿ ಸದಸ್ಯ, ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಸಿ.ಎ.ಬ್ಯಾಂಕ್ ನಿರ್ದೇಶಕ ಅಶ್ವಿನ್ ಎಲ್. ಶೆಟ್ಟಿ, ಸುರೇಶ್ ರೈ ಸೂಡಿಮುಳ್ಳು, ತಾರನಾಥ ಕಾಯರ್ಗ, ಗಿರಿಶಂಕರ ಸುಲಾಯ ಉಪಸ್ಥಿತರಿದ್ದರು.
ವೀರಮಂಗಲ ಪಿಎಂಶ್ರೀ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ತಾರನಾಥ ಸವಣೂರು ಕಾರ್ಯಕ್ರಮ ನಿರೂಪಿಸಿದರು.