ಪುತ್ತೂರು: ಸ್ವಚ್ಛತೆ ಎಂಬುದು ಭಾರತೀಯ ಸಂಸ್ಕೃತಿಯ ಒಂದು ಅಂಗವಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಇಡೀ ದೇಶವೇ ಮತ್ತೊಮ್ಮೆ ಸ್ಪೂರ್ತಿ ಪಡೆದುಕೊಂಡು ದೇಶ ಸ್ವಚ್ಛತೆಯತ್ತ ಕಾಲಿಡುತ್ತಿದೆ ಎಂದು ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣು ಸೇವಾ ಸಮಿತಿ ಅಧ್ಯಕ್ಷ ಮಧು ನರಿಯೂರು ಹೇಳಿದರು.
ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಸ್ವಚ್ಛತಾ ಕಾರ್ಯದ ಸಂದರ್ಭ ಅವರು ಮಾತನಾಡಿದರು.
ಕುರಿಯ ಉಳ್ಳಾಲ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ, ಶ್ರೀ ಮಹಾವಿಷ್ಣು ಸೇವಾ ಸಮಿತಿ ಸಹಕಾರದೊಂದಿಗೆ ನರೇಂದ್ರ ಪದವಿಪೂರ್ವ ಕಾಲೇಜಿನ ಗ್ರಾಮ ವಿಕಾಸ ಸಮಿತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ಮಹಾವಿಷ್ಣು ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ಬೊಳಂತಿಮಾರು, ಕಾಲೇಜಿನ ಗ್ರಾಮವಿಕಾಸ ಸಮಿತಿ ಸಂಯೋಜಕ, ಉಪನ್ಯಾಸಕ ಕಾರ್ತಿಕ್ ಕುಮಾರ್, ಗ್ರಂಥಪಾಲಕ ವಸಂತ ಕುಮಾರ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಳಿಕ ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದೇವಸ್ಥಾನದ ಅಂಗಣ ಹಾಗೂ ಪರಿಸರ ಶುಚಿಗೊಳಿಸಿದರು.