ಆಗ್ರಾ : ಉತ್ತರ ಪ್ರದೇಶದ ಆಗ್ರಾ ವಾಯುನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 22 ವರ್ಷದ ‘ಅಗ್ನಿವೀರ’ ಶ್ರೀಕಾಂತ್ ಕುಮಾರ್ ಚೌಧರಿ ರೈಫಲ್‌ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಅಗ್ನಿವೀರ ಶ್ರೀಕಾಂತ್ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯವರೆಂದು ಗುರುತಿಸಲಾಗಿದೆ. ರಜೆ ಸಿಗದ ಕಾರಣ ಖಿನ್ನತೆಗೆ ಒಳಗಾಗಿದ್ದ ಶ್ರೀಕಾಂತ್, ಅದೇ ಒತ್ತಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
“ಶ್ರೀಕಾಂತ್ ಅವರ ಸಾವಿನ ನಿಖರ ಕಾರಣ ತಿಳಿಯಲು ಆಂತರಿಕ ತನಿಖೆಗೆ ಸಮಿತಿ ರಚಿಸಲಾಗಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ,” ಎಂದು ವಾಯುಪಡೆ ಅಧಿಕಾರಿಗಳು ಹೇಳಿದ್ದಾರೆ.
ಶ್ರೀಕಾಂತ್ ಅವರ ಹುಟ್ಟೂರು ಬಲಿಯಾ ಜಿಲ್ಲೆಯ ನಾರಾಯಣಪುರ ಗ್ರಾಮದಲ್ಲಿ ಗುರುವಾರ ಸಂಜೆ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. “ಶ್ರೀಕಾಂತ್ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ವಾಸವಿದ್ದ ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಅವರ ಕುಟುಂಬ ಸದಸ್ಯರು ದೂರು ದಾಖಲಿಸಿಲ್ಲ. ಒಂದೊಮ್ಮೆ ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ,” ಎಂದು ಶಾಹಗಂಜ್ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.