ಮಂಗಳೂರು : ಮುದ್ದೇನಹಳ್ಳಿ ಶ್ರೀ ಸತ್ಯಸಾಯಿ ವಿವಿ ನೀಡಲು ಉದ್ದೇಶಿಸಿದ್ದ ಗೌರವ ಡಾಕ್ಟರೇಟ್‌ನ್ನು ಸ್ವೀಕರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ ಹಾಗೂ ಶಿಕ್ಷಣ, ಸಾಮಾಜಿಕ ಮತ್ತು ಧಾರ್ಮಿಕ ರಂಗಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ನಿರಾಕರಿಸಿದ್ದಾರೆ.
ತಾನೊಬ್ಬ ಸಾಮಾನ್ಯ ಸ್ವಯಂಸೇವಕನಾಗಿದ್ದು, ಪಟ್ಟಿಯಿಂದ ತಮ್ಮ ಹೆಸರನ್ನು ಕೈ ಬಿಡಬೇಕೆಂದು ವಿನೀತನಾಗಿ ಕೇಳಿಕೊಳ್ಳುವುದಾಗಿ ಅವರು ವಿಶ್ವವಿದ್ಯಾಲಯದ ಕುಲಪತಿ ನರಸಿಂಹ ಮೂರ್ತಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ನನ್ನಂತಹ ಸರ್ವ ಸಾಮಾನ್ಯ ವ್ಯಕ್ತಿಯನ್ನು ಅತ್ಯಂತ ದೊಡ್ಡ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದು, ನಾನೊಬ್ಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾನ್ಯ ಕಾರ್ಯಕರ್ತ. ಸಂಘದ ಅಪೇಕ್ಷೆಯಂತೆಯೇ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ.
ಎಲೆ ಮರೆ ಕಾಯಿಯಂತೆ ಕರ್ತವ್ಯಗಳನ್ನು ನಿಭಾಯಿಸಬೇಕೆಂದೇ ಸಂಘದ ಅಪೇಕ್ಷೆ. ಆದರೆ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ನನ್ನ ಚಿತ್ರ ಸ್ವಲ್ಪ ಹೊರ ಮುಖಕ್ಕೆ ಹೋಗಿದೆ. ಇದು ಇನ್ನಷ್ಟು ಹೊರಕ್ಕೆ ಅಂದರೆ- ಶಾಲು, ಹೂವು, ಹಾರ, ಪ್ರಶಂಸೆ, ಸನ್ಮಾನ, ಪ್ರಶಸ್ತಿಗಳ ಕಡೆಗೆ ಹೋದಾಗ ಸಂಘ ಕಲಿಸಿದ ‘ಸ್ವಯಂಸೇವಕತ್ವ’ದ ಭಾವಕಡಿಮೆ ಆಗುತ್ತಾ ಹೋಗುತ್ತದೆ. ಉಳಿದ ಸ್ವಯಂಸೇವಕರಿಗೆ ಮೇಲ್ಪಂಕ್ತಿಯೂ ಆಗುವುದಿಲ್ಲ. ಸಂಘದಲ್ಲಿ ಸಾಮಾನ್ಯ ಸ್ವಯಂಸೇವಕನಾಗಿರುವುದೇ ಒಂದು ಭಾಗ್ಯ ಎಂಬುದು ನನ್ನ ಭಾವನೆ. ಆದ್ದರಿಂದ ಈ ಶ್ರೇಷ್ಠ ಪ್ರಶಸ್ತಿ ಪಡೆಯುವ ಹೆಸರಿನ ಯೋಗ್ಯರ ಪಟ್ಟಿಯಿಂದ ನನ್ನ ಹೆಸರನ್ನು ಕೈಬಿಡಬೇಕೆಂದು ಪೂಜ್ಯ ಸದ್ಗುರುಗಳಲ್ಲಿ ಬೇಡಿಕೊಳ್ಳುತ್ತೇನೆ ಎಂದಿದ್ದಾರೆ.