ಕೋಲಾರ: ಕೆಎಂಎಫ್ ಹಾಲಿನ ದರ ಏರಿಕೆ ಮಾಡಿ ಇದೀಗ ರೈತರಿಗೆ ನೀಡುವ ಹಾಲಿನ ಬೆಲೆಯಲ್ಲಿ 2 ರೂಪಾಯಿ ಕಡಿತಗೊಳಿಸಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಆದೇಶ ಹೊರಡಿಸಿದೆ.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಆಡಳಿತ ಮಂಡಳಿಯು ಶುಕ್ರವಾರದಿಂದಲೇ ಜಾರಿಗೆ ಬರುವಂತೆ ರೈತರಿಂದ ಖರೀದಿಸುವ ಹಾಲಿನ ದರವನ್ನು 2 ರೂಪಾಯಿ ಕಡಿತಗೊಳಿಸಿ ಆದೇಶಿಸಿದ್ದು, ಪ್ರತಿ ಲೀಟರ್ ಗೆ ಇನ್ನು ಮುಂದೆ 33.4 ರೂ. ಬದಲಿಗೆ 31.4 ರೂ. ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಗೆ ಸಂಗ್ರಹವಾಗುತ್ತಿರುವ ಹಾಲಿನ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಜನವರಿಯಲ್ಲಿ ಪ್ರತಿ ದಿನ ಒಕ್ಕೂಟಗಳಿಗೆ 9.65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಆದರೆ ಜೂನ್ ತಿಂಗಳಿನಿಂದ ಪ್ರತಿ ದಿನ ಒಕ್ಕೂಟಗಳಿಗೆ 12.37 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಕ್ಕೂಟದಿಂದ ಸಂಘಗಳಿಗೆ ನೀಡುವ ದರವನ್ನು ಪರಿಷ್ಕರಿಸಿದೆ. ಅದರಂತೆ, ಸಂಘಗಳು ರೈತರಿಗೆ ನೀಡುವ ದರವನ್ನು ಕಡಿತಗೊಳಿಸಿವೆ.