ಮಂಗಳೂರು: ದ.ಕ.ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯತ್ ಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು 13 ನಗರ ಸ್ಥಳೀಯ ಸಂಸ್ಥೆಗಳಿಗೆ ಪೌರಾಯುಕ್ತರು ಹಾಗೂ ಮಂಗಳೂರು ಮಹಾ ನಗರ ಪಾಲಿಕೆಯ 60 ವಾರ್ಡ್ ಗಳಿಗೆ ಅಭಿಯಂತರನ್ನು ಮತ್ತು ಮುಖ್ಯಾಧಿಕಾರಿಗಳನ್ನು ಒಳಗೊಂಡಂತೆ 296 ಇನ್ಸಿಡೆಂಟ್ ಕಮಾಂಡರ್ ಗಳನ್ನು ನೇಮಕ ಮಾಡಲಾಗಿದೆ.
ಪ್ರತಿ ಗ್ರಾಮ ಪಂಚಾಯತ್, ವಾರ್ಡ್ ವಾರು ವಿಪತ್ತು ನಿರ್ವಹಣಾ ಯೋಜನೆಯನ್ನು ನಿರ್ಮಿಸಲಾಗಿದೆ.
ಇನ್ಸಿಡೆಂಟ್ ಕಮಾಂಡರ್ ಗಳು ತಮ್ಮ ವ್ಯಾಪ್ತಿಗೆ ಒಳಪಟ್ಟ ಪ್ರದೇಶಗಳಲ್ಲಿ ಸಂಭವನೀಯ ನೆರೆ ಹಾವಳಿ, ಭೂ ಕುಸಿತ, ತೋಡುಗಳು, ಕಾಲು ಸಂಕ ಮತ್ತು ವಿದ್ಯುತ್ ತಂತಿಗಳಿಂದ ಹಾಗೂ ಇನ್ನಿತರ ಮೂಲಗಳಿಂದ ವಿಪತ್ತು ಸಂಭವಿಸಬಹುದಾದ ಪ್ರದೇಶ ಗಳನ್ನು ಗುರುತಿಸಿ, ಅಗತ್ಯ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ವಿಪತ್ತು ಸಂಭವಿಸಬಹುದಾದ ಪ್ರದೇಶಗಳಲ್ಲಿರುವ ಮನೆಗಳಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳ, ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಕ್ಕೆ ನಿರಾಕರಿಸಿದ್ದಲ್ಲಿ ಪೊಲೀಸ್ ಇಲಾಖೆಯ ಸಹಕಾರ ಪಡೆಯಲು ಸೂಚನೆ ನೀಡಲಾಗಿದೆ. ಸಂಭವನೀಯ ವಿಪತ್ತು ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ಎಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸುವುದು ಮತ್ತು ನಿಯಮ ಉಲ್ಲಂಘಿಸಿ ತೆರಳುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ.