ಪುತ್ತೂರು: ದ.ಕ.ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ದ.ಕ.ಜಿಲ್ಲಾ ಸಮನ್ವಯ ವೇದಿಕೆಯ ಜಿಲ್ಲಾ ಮಟ್ಟದ ಮಹಾ ತರಬೇತಿ ಕಾರ್ಯಾಗಾರ ಜು.4 ಗುರುವಾರ ನೆಲ್ಲಿಕಟ್ಟೆ ಮಾತೃಛಾಯಾ ಸಭಾಂಗಣದಲ್ಲಿ ನಡೆಯಲಿದೆ ಎಂದು ವೇದಿಕೆಯ ಗೌರವ ಸಲಹೆಗಾರರಾದ ಕಸ್ತೂರಿ ಬೊಳುವಾರು ತಿಳಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಲಾ ಎಸ್ ಡಿಎಂಸಿ ಯವರನ್ನು ಅಭಿವೃದ್ಧಿ ಕಾರ್ಯದಲ್ಲಿ ಬೆಸೆಯುವ ವೇದಿಕೆ ಸಮನ್ವಯ ವೇದಿಕೆಯಾಗಿದ್ದು, ಯಾವುದೇ ಘಟನೆಗಳಾದಾಗ ಸ್ಥಳದಲ್ಲೇ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಸಮನ್ವಯ ವೇದಿಕೆ ಕಾರ್ಯಾಚರಿಸುತ್ತಿದೆ. ಜತೆಗೆ ಭೌತಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಶಿಕ್ಷಕರ ಸಂಘ ಹಾಗೂ ತಾಲೂಕು ಶಿಕ್ಷಕರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ನಡೆಯಲಿರುವ ಕಾರ್ಯಕ್ರಮವನ್ನು ಬೆಳಿಗ್ಗೆ 10.30 ಕ್ಕೆ ದ.ಕ.ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ ಕಸ್ತೂರಿ ಚಾಲನೆ ನೀಡಲಿದ್ದಾರೆ. ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಎಂ.ಇಸ್ಮಾಯಿಲ್ ನೆಲ್ಯಾಡಿ ಅಧ್ಯಕ್ಷತೆ ವಹಿಸಲಿದ್ದು, ಸಮನ್ವಯ ವೇದಿಕೆ ಸಂಸ್ಥಾಪಕ, ಬೆಂಗಳೂರಿನ ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ರಾಜ್ಯ ಸಮನ್ವಯ ವೇದಿಕೆ ಪ್ರಧಾನ ಕಾರ್ಯದರ್ಶಿ ಪಾರ್ವತಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್, ಪುತ್ತೂರು ಅಸಹಾಯಕರ ಟ್ರಸ್ಟ್ ಅಧ್ಯಕ್ಷೆ ನಯನ ರೈ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಪಾಟಾಲಿ, ಪುತ್ತೂರು ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮಹಮ್ಮದ್ ರಫೀಕ್ ದರ್ಬೆ ಪಾಲ್ಗೊಳ್ಳಲಿದ್ದಾರೆ ರಾಜ್ಯಾಧ್ಯಕ್ಷ ಉಮೇಶ್ ಜಿ. ಗಂಗವಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಎಸ್.ಎಂ., ಉಪಾಧ್ಯಕ್ಷ ಪ್ರವೀಣ್, ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ, ಮಾಧ್ಯಮ ಕಾರ್ಯದರ್ಶಿ ಅಜಿಝ್ ಉಪಸ್ಥಿತರಿದ್ದರು.