ಪುತ್ತೂರು: ಪುತ್ತೂರಿನ ಕಾಂಗ್ರೆಸ್‍ವಲಯದಲ್ಲಿ ನೈಜ ಕಾಂಗ್ರೆಸ್ಸಿಗರನ್ನು ಕಡೆಗಣನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿ ಬ್ಲಾಕ್ ಅಧ್ಯಕ್ಷರನ್ನಾಗಿ ನೈಜ ಕಾಂಗ್ರೆಸ್ಸಿಗರನ್ನು ನೇಮಕ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪುರುಷೋತ್ತಮ ಬೂಡಿಯಾರ್ ಆಗ್ರಹಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರಿನ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಶಾಸಕ ಅಶೋಕ್ ರೈ ಕೋಡಿಂಬಾಡಿ ಅವರನ್ನು ಹೊರತುಪಡಿಸಿ ಉಳಿದ ನಾಯಕರು ಕಾಂಗ್ರೆಸ್ ಪಕ್ಷವನ್ನ ಮೇಲೆತ್ತಲು ಪ್ರಯತ್ನಿಸುತ್ತಿಲ್ಲ. ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪುತ್ತೂರಿನಲ್ಲಿ ನೆಲಕಚ್ಚಲಿದೆ ಎಂದರು.
ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಕಾಂಗ್ರೆಸ್ ನಾಯಕರು ನಾವು ಅಷ್ಟು ಅಂತರದಲ್ಲಿ ಗೆಲ್ತೀವಿ. ಇಷ್ಟು ಅಂತರ ಸಿಗಬಹುದು ಎಂದು ಲೆಕ್ಕಗಳನ್ನೇ ಹಾಕಿದ್ದು ಬಿಟ್ಟರೇ, ಪಕ್ಷಕ್ಕೆ ಬೇಕಾಗಿ ಯಾವುದೇ ಕೆಲಸಗಳನ್ನ ಮಾಡಿಲ್ಲ. ಜೊತೆಗೆ ಹಿರಿಯ ನಾಯಕರನ್ನ ಕಡೆಗಣಿಸಿಕೊಂಡು ಬಂದಿದ್ದಾರೆ. ಈಗಿರುವ ಕೆಲವೊಂದು ಪುತ್ತೂರಿನ ಕಾಂಗ್ರೆಸ್ಸಿಗರು ತಮ್ಮದೇ ನಿರ್ಧಾರಗಳನ್ನ ಬಯಸಿ, ಹಿರಿಯರನ್ನ ಕಡೆಗಣಿಸುವುದಲ್ಲದೇ, ಕಾಂಗ್ರೆಸ್ಸಿಗೆ ಬೇಕಾಗಿ ನಮ್ಮಿಂದ ಒಂದೂ ಸಲಹೆಯನ್ನೂ ಕೇಳಿಲ್ಲ. ಹೀಗಾಗಿಯೇ ಪುತ್ತೂರಿನಲ್ಲಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಅಧಃಪತನ ಆಗಲಿದೆ ಎಂದು ಭವಿಷ್ಯ ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನ ಬಾಲಕೃಷ್ಣ ಭಂಡಾರಿ, ಸುನಿಲ್, ಇಬ್ರಾಹಿಂ ನೆಕ್ಕರೆ, ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.