ತಂದೆಯ ನಿಧನಕ್ಕೆ ರಜೆ ಕೊಡದ ಕಂಪನಿ : ಕ್ಯಾಪ್ಟನ್ ಬ್ರಿಜೇಶ್ ಚೌಟ ತುರ್ತು ಸ್ಪಂದನೆ 

ಮಂಗಳೂರು  : ಸುಳ್ಯ ಮೂಲದ ಯುವಕನ ತಂದೆಯ ನಿಧನ ಹಿನ್ನೆಲೆಯಲ್ಲಿ ಊರಿಗೆ ಬರಲು ಯತ್ನಿಸಿದ ಯುವಕನಿಗೆ ರಜೆ ಕೊಡದೆ, ಪಾಸ್ ಪೋರ್ಟ್ ತೆಗೆದಿಟ್ಟು ಸತಾಯಿಸಿದ ವಿಷಯ ತಿಳಿದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿದೇಶಾಂಗ ಇಲಾಖೆ ಮತ್ತು ಮಾಲ್ಡೀವ್ಸ್ ಎಂಬಸ್ಸಿ ಕಚೇರಿಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿದ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಗುರುಪ್ರಸಾದ್ ಗೋಳ್ಯಾಡಿ ಜೂ. 20ರಂದು ನಿಧನರಾಗಿದ್ದರು. ಇವರ ಮಗ ತ್ರಿಶೂಲ್ ಎರಡು ವರ್ಷಗಳಿಂದ ಮಾಲ್ಡೀವ್ಸ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿದ್ದು, ತಂದೆಯ ನಿಧನ ವಿಷಯ ತಿಳಿದು ಊರಿಗೆ ಬರಲು ಪ್ರಯತ್ನ ಮಾಡಿದ್ದರು. ಆದರೆ, ಕಂಪನಿಯವರು ರಜೆಯನ್ನೂ ಕೊಡದೆ ಕೆಲಸ ಬಿಟ್ಟು ಹೋಗದಂತೆ ಪಾಸ್ ಪೋರ್ಟ್ ಪ್ರತಿಯನ್ನೇ ತೆಗೆದಿಟ್ಟಿದ್ದರು. ಇತ್ತ ಮನೆಯವರ ಏಕೈಕ ಮಗ ವಿದೇಶದಿಂದ ಬರುತ್ತಾನೆಂದು ಜೂನ್ 20ರಂದು ಗುರುಪ್ರಸಾದ್ ನಿಧನ ಆಗಿದ್ದರೂ, 24ರ ವರೆಗೂ ಕಾದಿದ್ದರು. ಕೊನೆಗೆ, ತ್ರಿಶೂಲ್ ತನಗೆ ಬರಲಾಗುವುದಿಲ್ಲ, ನೀವು ಅಂತ್ಯಕ್ರಿಯೆ ಪೂರ್ತಿಗೊಳಿಸಿ ಎಂದು ಹೇಳಿದ್ದರು ಹಾಗಾಗಿ ಅಂತ್ಯಕ್ರಿಯೆ ನೆರವೇರಿಸಿದ್ದರು.

ಜೂನ್ 24ರಂದು ಸಂಸದ ಬ್ರಿಜೇಶ್ ಚೌಟ ಪ್ರಮಾಣ ವಚನಕ್ಕಾಗಿ ದೆಹಲಿಗೆ ಹೋಗಿದ್ದಾಗಲೇ, ಗುರುಪ್ರಸಾದ್ ಅವರ ಹತ್ತಿರದ ಸಂಬಂಧಿಕ ಬೆಳ್ತಂಗಡಿ ತಾಲೂಕಿನ ಪದ್ಪುಂಜ ಗ್ರಾಮದ ನಿವೃತ್ತ ಉಪನ್ಯಾಸಕ ರುಕ್ಮಯ್ಯ ಗೌಡ ನೇರವಾಗಿ ಸಂಸದರಿಗೆ ಫೋನ್ ಕರೆ ಮಾಡಿದ್ದರು. ತ್ರಿಶೂಲ್ ನನ್ನು ಕರೆತರಲು ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಕೂಡಲೇ ಸ್ಪಂದಿಸಿದ ಸಂಸದರು, ವಿದೇಶಾಂಗ ಇಲಾಖೆ ಮತ್ತು ಮಾಲ್ಡೀವ್ಸ್ ಹೈಕಮಿಷನ್ ಗೆ ನೇರವಾಗಿ ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದರು. ಸಂಸದರ ಮನವಿಗೆ ಮಾಲ್ಡೀವ್ಸ್ ಭಾರತೀಯ ರಾಯಭಾರ ಕಚೇರಿಯಿಂದ ಪ್ರತಿಕ್ರಿಯೆ ಬಂದಿದ್ದು, ಯುವಕನ ಬಿಡುಗಡೆಗೆ ಪ್ರಯತ್ನಿಸುವ ಭರವಸೆ ಲಭಿಸಿತ್ತು.































 
 

ರಾಯಭಾರ ಕಚೇರಿಯ ಸೂಚನೆಯಂತೆ, ಖಾಸಗಿ ಕಂಪನಿಯ ಪ್ರತಿನಿಧಿಗಳು ಯುವಕನಿಗೆ ರಜೆ ಕೊಟ್ಟಿದ್ದಲ್ಲದೆ, ವೇತನ ಸಹಿತ ಊರಿಗೆ ಕಳುಹಿಸಿಕೊಟ್ಟಿದ್ದಾರೆ. ಅದರಂತೆ, ಜೂನ್ 27ರ ಗುರುವಾರ ರಾತ್ರಿ ತ್ರಿಶೂಲ್ ಬೆಂಗಳೂರು ತಲುಪಿದ್ದು, ಅಲ್ಲಿಂದ ರಸ್ತೆ ಮೂಲಕ ಶುಕ್ರವಾರ ಬೆಳಗ್ಗೆ ಊರಿಗೆ ತಲುಪಿದ್ದಾರೆ. ಈ ಬಗ್ಗೆ ಫೋನ್ ಕರೆ ಮಾಡಿದ್ದ ರುಕ್ಮಯ್ಯ ಗೌಡರಲ್ಲಿ ಕೇಳಿದಾಗ, ತ್ರಿಶೂಲ್ ಮಾಲ್ಡೀವ್ಸ್ ತೆರಳಿ ಮುಂದಿನ ಅಕ್ಟೋಬರ್ ಗೆ ಎರಡು ವರ್ಷ ಆಗುತ್ತದೆ. ಅಲ್ಲಿ ವರೆಗೂ ರಜೆ ಕೊಡುವುದಿಲ್ಲ ಎಂದು ಕಂಪನಿಯವರು ಹಠ ಹಿಡಿದಿದ್ದರು. ಏಕೈಕ ಮಗ ಆಗಿದ್ದರಿಂದ ನಾವು ಮೃತದೇಹವನ್ನು ಮಂಗಳೂರಿನಲ್ಲೇ ಇಟ್ಟು ನಾಲ್ಕು ದಿನ ಕಾದೆವು. ಕೊನೆಗೆ, ಅಂತ್ಯಕ್ರಿಯೆ ಮಾಡಿದ್ದೆವು. ಸಂಸದರಿಗೆ ಕರೆ ಮಾಡಿದಾಗ ತುರ್ತು ಸ್ಪಂದಿಸಿ ತುಂಬ ಉಪಕಾರ ಮಾಡಿದ್ದಾರೆ. ಅದನ್ನು ಯಾವತ್ತೂ ಮರೆಯುವುದಿಲ್ಲ ಎಂದಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top