ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಉಪ್ಪಿನಂಗಡಿ: ಗಂಡನೊಂದಿಗೆ ಜಗಳವಾಡಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ  ಮಹಿಳೆಯೋರ್ವರನ್ನು ಯುವಕನೋರ್ವ ರಕ್ಷಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬನ್ನಿಂಗಳ ಸಮೀಪದ ನಿವಾಸಿಯೋರ್ವರು ಗುರುವಾರ ರಾತ್ರಿ ಸುಮಾರು 9.30 ರಿಂದ 10ರ ನಡುವೆ ಉಪ್ಪಿನಂಗಡಿಯ ನೇತ್ರಾವತಿ ನದಿ ಸೇತುವೆಯ ಮೇಲೆ ಸಂಶಯ ಬರುವಂತೆ ಆ ಕಡೆ, ಈ ಕಡೆ ನಡೆದಾಡುವುದು ಕಾಣಿಸಿಕೊಂಡಿದ್ದು, ಇದನ್ನು ಕಂಡ ರಿಕ್ಷಾ ಚಾಲಕರೋರ್ವರು ಅಲ್ಲಿಯೇ ಸಮೀಪದ ನಿವಾಸಿ ಸಾಮಾಜಿಕ ಕಾರ್ಯಕರ್ತ ಫಯಾಝ್ ಯು.ಟಿ. ಅವರ ಗಮನಕ್ಕೆ ತಂದಿದ್ದರು. ತಕ್ಷಣವೇ ಕಾರ್ಯಪ್ರವೃತರಾದ ಫಯಾಜ್ ಯು.ಟಿ. ಅವರು ಸೇತುವೆಯ ಮೇಲೆ ತೆರಳಿದ್ದು, ಅಷ್ಟರಲ್ಲೇ ಆ ಮಹಿಳೆಯು ಸೇತುವೆಯ ತಡೆ ಗೋಡೆ ಯ ಮೇಲೆ ಹತ್ತಿ ನದಿಗೆ ಹಾರಲು ಸಿದ್ಧರಾಗಿದ್ದರು. ತಕ್ಷಣವೇ ಅಲ್ಲಿಗೆ ಧಾವಿಸಿದ ಫಯಾಜ್ ಅವರು ಕ್ಷಿಪ್ರಗತಿಯಲ್ಲಿ ಆ ಮಹಿಳೆಯ ಕೈ ಹಿಡಿದು ಈ ಕಡೆ ಎಳೆದಿದ್ದು, ಮಹಿಳೆಯು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆದಿದ್ದಾರೆ. ಬಳಿಕ ಮಹಿಳೆಯನ್ನು ಸಮೀಪದ ಮನೆಯೊಂದಕ್ಕೆ ಕರೆದೊಯ್ದು ಸಂತೈಸಿ ಸ್ಥಳೀಯರ ನೆರವಿನಿಂದ ಮಹಿಳೆಯನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಇಬ್ಬರು ಮಕ್ಕಳಿರುವ ಈ ಹಿಂದೂ ಮಹಿಳೆಯು ಮೂಲತಃ ಬೆಂಗಳೂರು ನಿವಾಸಿಯಾಗಿದ್ದು, ಕೆಲವು ವರ್ಷಗಳ ಹಿಂದೆ ಇಲ್ಲಿನ ಯುವಕನೋರ್ವನನ್ನು ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದ ಹಿಂದೆ ಇವರ ಪತಿ ಕುಡಿದು ಬಂದು ಈ ಮಹಿಳೆಗೆ ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಮಹಿಳೆ ರಾತ್ರಿ ತನ್ನ ಮನೆಯಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿರುವ ನೇತ್ರಾವತಿ ನದಿಯ ಸೇತುವೆಯ ಬಳಿ ನಡೆದುಕೊಂಡೇ ಬಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಕಳೆದೆರಡು ದಿನಗಳಿಂದ ನಿರಂತರ ಮಳೆಯ ಕಾರಣದಿಂದ ನಿನ್ನೆ ನೇತ್ರಾವತಿ ನದಿಯಲ್ಲಿ ತುಂಬಾ ನೀರು ಕೂಡಾ ಇದ್ದು, ರಭಸದಿಂದ ಹರಿಯುತ್ತಿತ್ತು. ತನ್ನ ತಂಡದೊಂದಿಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಈಗಾಗಲೇ ನಡೆಸಿರುವ ಯು.ಟಿ. ಫಯಾಝ್ ಅವರ ಈ ನಡೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.































 
 

ಹಿಂಬಾಲಿಸಿಕೊಂಡು ಬಂದ ನಾಯಿ:

ಗಂಡನೊಂದಿಗೆ ಜಗಳವಾಡಿ ಆತ್ಮಹತ್ಯೆಯ ನಿರ್ಧಾರದೊಂದಿಗೆ ಸುಮಾರು ನಾಲ್ಕು ಕಿ.ಮೀ. ದೂರದ ಉಪ್ಪಿನಂಗಡಿಗೆ ರಾತ್ರಿ ವೇಳೆ ಕಾಲ್ನಡಿಗೆಯಲ್ಲೇ ಬಂದ ಮಹಿಳೆಯ ಮನಸ್ಸನ್ನು ಅರಿತ ಅವರ ಸಾಕು ನಾಯಿ ಆಕೆಯನ್ನು ಹಿಂಬಾಲಿಸಿಕೊಂದು ಬಂದು ಸೇತುವೆಯಿಂದ ನದಿಗೆ ಹಾರಲು ಮನಸ್ಸು ಮಾಡಿದ್ದ ಮಹಿಳೆಯ ಚೂಡಿದಾರವನ್ನು ಕಚ್ಚಿ ಹಿಡಿದೆಳೆಯುತ್ತಿತ್ತು. ಮಾತ್ರವಲ್ಲದೆ ಬೊಗಳುವಿಕೆಯೊಂದಿಗೆ ಆತ್ಮಹತ್ಯೆಯ ಯತ್ನದಿಂದ ಹಿಂದೆ ಸರಿಯಲು ಒತ್ತಾಯಿಸುತ್ತಿತ್ತು. ನಾಯಿಯ ಈ ಚಡಪಡಿಸುವಿಕೆ ಹಾಗೂ ಆಕೆಯ ಉಡುಪನ್ನು ಕಚ್ಚಿ ಎಳೆಯುತ್ತಿದ್ದನ್ನು ಕಂಡ ರಿಕ್ಷಾ ಸವಾರನಿಗೆ ಇಲ್ಲೊಂದು ಅಹಿತಕರ ಘಟನೆ ನಡೆಯಲಿದೆ ಎಂಬ ಭಾವನೆ ಮೂಡಿ ಫಯಾಜ್ ರವರಿಗೆ ತಿಳಿಸಲು ಕಾರಣವಾಯಿತು. ಮೂಕಪ್ರಾಣಿಯಾದ ನಾಯಿಯ ತುಡಿತ ಮತ್ತು ಪ್ರಯತ್ನ ಮಹಿಳೆಯನ್ನು ರಕ್ಷಿಸಲು ನೆರವಾದಂತಾಗಿದೆ.

ಬಾಡಿಗೆ ಮನೆಯಲ್ಲಿ ಇದ್ದಾಗ ಇದ್ದ ಅನುರಾಗ:

ಸ್ವಂತ ಮನೆಯಲ್ಲಿ ಮರೆಯಾಯಿತು ಪತಿಯನ್ನು ಹದಿನಾರು ವರ್ಷಗಳ ಹಿಂದೆ ಮನಸಾರೆ ಪ್ರೀತಿಸಿ, ಮದುವೆಯಾಗಿ 300 ಕಿ.ಮೀ. ದೂರದ ಬೆಂಗಳೂರಿನಿಂದ ಬಂದು ಸಂಸಾರ ನಡೆಸುತ್ತಿದ್ದ ಈಕೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಹದಿನೈದು ವರ್ಷಗಳ ಕಾಲ ಸಂತಸದಿಂದಲೇ ಜೀವನ ನಡೆಸಿದ್ದರು. ಪತಿಗೆ ತನ್ನ ಪಿತ್ರಾರ್ಜಿತ ನೆಲೆಯಲ್ಲಿ ದೊರೆತ ಆಸ್ತಿಯಲ್ಲಿ ಸ್ವಂತ ಮನೆಯನ್ನು ಕಟ್ಟಿ, ಕೃಷಿ ನಡೆಸುತ್ತಾ ಸ್ವಾಭಿಮಾನಿ ಜೀವನ ನಡೆಸಲು ಪ್ರಾರಂಭಿಸಿದ ಇತ್ತೀಚಿನ ಒಂದು ವರ್ಷದಲ್ಲಿ ಪತಿ -ಪತ್ನಿಯ ನಡುವಿನ ಅನುರಾಗ ಮರೆಯಾಗಿ ದ್ವೇಷ ಮೂಡಿರುವುದು ವಿಸ್ಮಯ ಮೂಡಿಸಿದೆ. ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದರೂ ಕ್ಷುಲ್ಲಕ ವಿಚಾರದಲ್ಲಿ ಜೀವನವನ್ನು ಕೊನೆಗೊಳಿಸಲು ಮುಂದಾದ ಮಹಿಳೆಗೆ ಪೊಲೀಸರು ವಿವೇಕ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಶುಕ್ರವಾರದಂದು ಪತಿ – ಪತ್ನಿಯನ್ನು ಕರೆಯಿಸಿ ಪೊಲೀಸರು ಕೌನ್ಸಿಲಿಂಗ್ ನಡೆಸಿದ್ದಾರೆ. ಮಕ್ಕಳಿಬ್ಬರು ತಂದೆಯೊಂದಿಗೆ ಇರಲು ಇಚ್ಚಿಸಿದರೆ, ಆಕೆ ತನ್ನ ತಾಯಿಯ ಜೊತೆ ಹೋಗುವುದಾಗಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top