ಪುತ್ತೂರಿನಲ್ಲಿ ಅದ್ದೂರಿಯಾಗಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ | ವ್ಯವಹಾರಿಕವಾಗಿ ಶಿಕ್ಷಣ, ರಾಜಕೀಯ, ಧಾರ್ಮಿಕ, ಸಾಮಾಜಿಕವಾಗಿ ಸಮಾಜಕ್ಕೆ ಒಕ್ಕಲಿಗರ ಕೊಡುಗೆ ಬಹಳಷ್ಟಿದೆ : ತಹಶೀಲ್ದಾರ್ ಪುರಂದರ ಹೆಗ್ಡೆ | ಕೆಂಪೇಗೌಡರ ದೂರದೃಷ್ಟಿತ್ವದಿಂದ ಬೆಂಗಳೂರು ನಗರ ಸುಂದರವಾಗಿ ಬೆಳೆದಿದೆ : ಭಾಸ್ಕರ ಕೋಡಿಂಬಾಳ | ಕೆಂಪೇಗೌಡರ ಆಡಳಿತ ಸದಾ ಕಾಲಕ್ಕೆ ಮಾದರಿಯಾಗಲಿದೆ : ಸೀತಾರಾಮ ಕೇವಳ

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು.

ಸಮಾಜಕ್ಕೆ ಒಕ್ಕಲಿಗರ ಕೊಡುಗೆ ಬಹಳಷ್ಟಿದೆ :

ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಜ್ಯೋತಿ ಪ್ರಜ್ವಲನೆ ಮಾಡಿ ಚಾಲನೆ ನೀಡಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮ ಮೈಲಿಗಲ್ಲಾಗಿದೆ. ಎಲ್ಲರೊಳು ಒಂದಾದಾಗ ಎಲ್ಲವನ್ನು ಸಾಧಿಸಲು ಸಾಧ್ಯ. ರಾಜ್ಯದ ಇತಿಹಾಸದಲ್ಲಿ ಬೆಂಗಳೂರನ್ನು ಕೇಂದ್ರವಾಗಿ ಇಟ್ಟುಕೊಂಡು ಆಡಳಿತದೊಂದಿಗೆ ಕಟ್ಟಿಬೆಳೆಸಿದ್ದಾರೆ. 15ನೇ ಶತಮಾನದಲ್ಲಿ ರಾಜಧಾನಿ ಬೆಂಗಳೂರು ಸ್ಥಾಪನೆ ಮಾಡಿದ ರಾಜ ಒಕ್ಕಲಿಗ ಸಮಾಜದ ಕೆಂಪೇಗೌಡರು. ವ್ಯವಹಾರಿಕವಾಗಿ ಶಿಕ್ಷಣ, ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಒಕ್ಕಲಿಗರು ಬಹಳಷ್ಟು ಸಾಧನೆ ಮಾಡಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಮಹತ್ತರವಾಗಿದೆ ಎಂದರು.





























 
 

ದೂರದೃಷ್ಟಿತ್ವದಿಂದ ಬೆಂಗಳೂರು ನಗರ ಸುಂದರವಾಗಿ ಬೆಳೆದಿದೆ :

ಮುಖ್ಯ ಅತಿಥಿಗಳಾಗಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಭಾಸ್ಕರ್ ಕೋಡಿಂಬಾಳ ಮಾತನಾಡಿ, ನಾಡಪ್ರಭು ಕೆಂಪೇಗೌಡರ 500 ವರ್ಷಗಳ ದೂರದೃಷ್ಟಿತ್ವದಿಂದ ಬೆಂಗಳೂರು ಇಷ್ಟೊಂದು ಸುಂದರವಾಗಿ ಬೆಳೆದಿದೆ. ಈ ನಿಟ್ಟಿನಲ್ಲಿ ಎಲ್ಲಾ ನಗರಗಳು ಬೆಳೆಯಬೇಕು. ಇದಕ್ಕಾಗಿ ಮುಂದಿನ ಯೋಜನೆ ತಯಾರಿಸುವವರು 100-200 ವರ್ಷಗಳ ಯೋಜನೆ ಇಟ್ಟು ಯೋಜನೆಗಳನ್ನು ತಯಾರಿಸಬೇಕು. ಆಗ ಅಭಿವೃದ್ಧಿ ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಶುಭ ಹಾರೈಸಿದರು.

ಕೆಂಪೇಗೌಡರ ಆಡಳಿತ ಸದಾ ಕಾಲಕ್ಕೆ ಮಾದರಿಯಾಗಿದೆ :

ಸವಣೂರು ವಿದ್ಯಾರಶ್ಮಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಸಂಸ್ಮರಣಾ ಉಪನ್ಯಾಸ ನೀಡಿ, ಸಮಯಕ್ಕೆ ಯಾರು ಬೆಲೆ ನೀಡುತ್ತಾರೆ ಕೀರ್ತಿ, ಶ್ರೇಯ ಲಭಿಸುತ್ತದೆ. ಮಾನವ ಜನಾಂಗ ಮಾಡುವ ಎರಡು ವಿಧದ ಕೆಲಸ ಒಂದು ಕಟ್ಟುವ ಕೆಲಸ, ಮತ್ತೊಂದು ಒಡೆಯುವ ಕೆಲಸ. ಕೆಂಪೇಗೌಡರು ಕಟ್ಟುವ ಕೆಲಸವನ್ನು ಮಾಡಿದ್ದಾರೆ.  510 ವರ್ಷಗಳ ಹಿಂದೆ ಕೇವಲ 22 ವಯಸ್ಸಿನಲ್ಲಿ ನಾಡಪ್ರಭು ಕೆಂಪೇಗೌಡರು ತನ್ನ ದೂರದರ್ಶಿತ್ವದಿಂದ, ಜಾಣ್ಮೆ, ಚಾಣಾಕ್ಷತನದಿಂದ ಕೇವಲ ಎರಡು ಚದರ ಅಡಿಯಷ್ಟು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದ್ದಾರೆ. ಅತೀ ಸಣ್ಣ ವಯಸ್ಸಿನಲ್ಲಿ ತಂದೆ ಕೆಂಪರಂಜೇ ಗೌಡರ ಮಾರ್ಗದರ್ಶನ, ಒಡನಾಟದಿಂದ ಕೆಂಪೇಗೌಡರು ಇಷ್ಟು ದೊಡ್ಡ ಕೆಲಸ ಮಾಡಲು ಸಾಧ್ಯವಾಗಿದೆ. ಗುರುಕುಲ ಶಿಕ್ಷಣ ಪಡೆದ ಕೆಂಪೇಗೌಡರು ಬೆಂಗಳೂರು ಕಟ್ಟುವ ಸಂದರ್ಭದಲ್ಲಿ ಜಾಗ ಕಬಳಿಕೆ ವಿಚಾರದಲ್ಲಿ ಜೈಲಿಗೆ ಹೋದವರು. ಜೈಲಿನಿಂದ ಹೊರಗೆ ಬಂದು ಇನ್ನಷ್ಟು ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತಾರ ಮಾಡುತ್ತಾರೆ. ಪರಿಸರವಾದಿ ನೆಲೆಯಲ್ಲಿ ಮೂಲಭೂತಗಳಲ್ಲಿ ಒಂದಾದ ಕೆರೆಗಳ ರಚನೆ, ಮರಗಳನ್ನು ನೆಡಬೇಕು ಎಂಬ ಯೋಚನೆಯಿಂದ ವಾತಾವರಣ ತಂಪಾಗಿರಬೇಕು ಎಂಬ ದೃಷ್ಟಿಯನ್ನು ಹೊಂದಿ ನೂರಾರು ಕೆರೆಗಳನ್ನು ನಿರ್ಮಾಣ ಮಾಡುತ್ತಾರೆ. ಹೀಗೆ ಬೆಂಗಳೂರು ನಗರವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಕಟ್ಟಿ ಬೆಳೆಸಿದವರು ಕೆಂಪೇಗೌಡರು. ಅಂತಹಾ ಕೆಂಪೇಗೌಡರ ಕಂಚಿನ ಪ್ರಗತಿಯ ಮೂರ್ತಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿರುವುದು ಅವರಿಗೆ ದೊರೆತ ಅಂತ್ಯಂತ ದೊಡ್ಡ ಗೌರವ. ಜತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದರು. ಕಲೆಗಳ ಆರಾಧಕರಾಗಿದ್ದರು. ಯಕ್ಷಗಾನ ಕಲೆಯನ್ನು ಕಟ್ಟಿ ಬೆಳೆಸುವಲ್ಲಿ ಕೆಂಪೇಗೌಡರ ಮಹತ್ತರ ಪಾತ್ರವಿದೆ. ಕೆಂಪೇಗೌಡರ ಆಡಳಿತ ಸದಾ ಕಾಲಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಎಸ್‍ ಎಸ್‍ ಎಲ್‍ ಸಿಯಲ್ಲಿ ತಾಲೂಕಿನಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಮಾಜಿ ಶಾಸಕ ಸಂಜೀವ ಮಠಂದೂರು ಅಭಿನಂದಿಸಿದರು.

ಅತಿಥಿಗಳಾಗಿ ನಗರಸಭಾ ಪೌರಾಯುಕ್ತ ಮಧು ಎಸ್‍. ಮನೋಹರ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್‍ ಕುಮಾರ್ ಭಂಡಾರಿ ಪಾಲ್ಗೊಂಡಿದ್ದರು.

ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧಾ ವಿಜೇತರನ್ನು ಲೋಕೇಶ್‍ ಎಸ್‍.ಆರ್‍., ಮಧು ಎಸ್‍.ಮನೋಹರ್, ನವೀನ್ ಕುಮಾರ್ ಭಂಡಾರಿ ಬಹುಮಾನ ನೀಡಿದರು. ಒಕ್ಕಲಿಗ ಗೌಡ ಸಮುದಾಯದ ಐದು ಮಂದಿ ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದವರನ್ನು ಭಾಸ್ಕರ ಕೋಡಿಂಬಾಳ ಅಭಿನಂದಿಸಿದರು. ತಾಲೂಕಿನಲ್ಲಿ ವಿವಿಧ ಸಾಧನೆಗೈದ ಸಮುದಾಯದವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸುವಲ್ಲಿ ಯಶಸ್ವಿಯಾದ ರಾಧಾಕೃಷ್ಣ ನಂದಿಲ ಅವರನ್ನು ಅಭಿನಂದಿಸಲಾಯಿತು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣಾಧಿಕಾರಿ ಲೋಕೇಶ್‍ ಎಸ್‍.ಆರ್‍. ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top