ದಕ್ಷಿಣ ಕನ್ನಡ, ಹಾಸನ ಮತ್ತು ಕೊಡಗು ಜಿಲ್ಲೆಯ ಮಧ್ಯದಲ್ಲಿರುವ ಪ್ರಸಿದ್ದ ಪ್ರವಾಸಿ ತಾಣ ಬಿಸಿಲೆ ಘಾಟಿಯ ಪಟ್ಲ ಬೆಟ್ಟದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ ಸ್ಥಳೀಯ ಜೀಪು ಚಾಲಕರ ಬಂಧನವಾಗಿದೆ.
ಇತ್ತೀಚೆಗೆ ಪಟ್ಲಬೆಟ್ಟಕ್ಕೆ ತೆರಳಿದ ಮಂಗಳೂರಿನ ಬೈಕರ್ಸ್ ಮೇಲೆ ಸ್ಥಳೀಯ ಜೀಪು ಚಾಲಕರು ಹಲ್ಲೆ ಮಾಡಿದ್ದರು. ಇದೀಗ ನಾಲ್ವರು ಜೀಪು ಚಾಲಕರ ಬಂಧನವಾಗಿದೆ.
ಹಾಸನ ಜಿಲ್ಲಾ ಕೇಂದ್ರದಿಂದ ಪಟ್ಲ ಬೆಟ್ಟ 80 ಕಿ.ಮೀ ದೂರದಲ್ಲಿದೆ. ಸುಬ್ರಹ್ಮಣ್ಯದಿಂದ 30ಕಿಮೀ ದೂರದಲ್ಲಿರುವ ಈ ಬೆಟ್ಟ ವೀಕ್ಷಣೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಸುಮಾರು 5 ವರ್ಷಗಳಿಂದ ಈಚೆಗೆ ಭಾರಿ ಪ್ರಸಿದ್ಧಿ ಪಡೆದ ಈ ಬೆಟ್ಟದಲ್ಲಿ ಈಗೀಗ ಬಾರಿ ದೊಡ್ಡ ದಂಧೆಯೇ ಆಗುತ್ತಿದೆ.
ಅಲ್ಲಿ ಬಿಳಿ ಬೋರ್ಡ್ ನ ಖಾಸಗಿ ಪಿಕಪ್ ಗಳನ್ನು ಹೊಂದಿರುವ ವಾಹನ ಮಾಲಕರು ಬೆಟ್ಟಕ್ಕೆ ಖಾಸಗಿ ವಾಹನಗಳ ಮೂಲಕ ಸಂಚರಿಸಲು ಅವಕಾಶ ನೀಡುತ್ತಿಲ್ಲ. ತಮ್ಮ ಖಾಸಗಿ ಬಿಳಿ ನಂಬರ್ ಪ್ಲೇಟ್ ಹೊಂದಿರುವ ಪಿಕಪ್ ನಲ್ಲೇ ಬಾಡಿಗೆ ನಡೆಸಿ ಮತ್ತು ಅಪಾಯಕಾರಿ ರೀತಿ ಜನರನ್ನು ತುಂಬಿಸಿ ಕಾನೂನು ಉಲ್ಲಂಘಿಸಿದರೂ ಸಂಬಂಧಪಟ್ಟ ಇಲಾಖೆ ಮೌನವಾಗಿರುವುದೇ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಗೂಡ್ಸ್ ವಾಹನದಲ್ಲಿ ಪ್ರವಾಸಿಗರನ್ನು ಸಾಗಿಸಿ ಏನಾದರು ಅವಘಡ ಸಂಭವಿಸಿದರೆ ಇನ್ಸೂರೆನ್ಸ್ ಕ್ಲೈಮ್ ಆಗುವುದಿಲ್ಲ. ಇಷ್ಟು ಅನಾಹುತವಾತದರೂ ಹಾಸನ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಮೌನವಹಿಸಿರುವುದೇ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.