ಪುತ್ತೂರು: ಚುನಾವಣಾ ಪ್ರಚಾರದ ವೇಳೆ ನನ್ನ ಕ್ಷೇತ್ರದ ಜನರಿಗೆ ಕೊಟ್ಟ ಮಾತಿನಂತೆ ಗ್ರಾಮದ ಪ್ರತೀ ಮನೆ ಮನೆಗೂ ಹಕ್ಕು ಪತ್ರ ತಲುಪಿಸುವ ಕೆಲಸವನ್ನು ಮಾಡಿಯೇ ಸಿದ್ದ ಶಾಸಕ ಅಶೋಕ್ ರೈ ಹೇಳಿದರು.
ಅವರು ನೆಟ್ಟಣಿಗೆ ಮುಡ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ಹಾಗೂ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಅಕ್ರಮ ಸಕ್ರಮ ಹಕ್ಕು ಪತ್ರ ವಿತರಣೆಗೆ ಚಾಲನೆ ನೀಡಲಾಗಿದೆ. ಒಟ್ಟು 13000 ಅರ್ಜಿಗಳು ಇದೆ. ಇವೆಲ್ಲವನ್ನೂ ಹಂತ ಹಂತವಾಗಿ ವಿಲೇವಾರಿ ಮಾಡಿಯೇ ಮಾಡುತ್ತೇವೆ. ನನ್ನ ಅರ್ಜಿ ಏನಾಗಬಹುದೋ ಎಂಬ ಭಯ ಯಾರಿಗೂ ಬೇಡ. ಖಂಡಿತವಾಗಿಯೂ ನಿಮಗೆ ಹಕ್ಕುಪತ್ರ ಸಿಕ್ಕೇ ಸಿಗುತ್ತದೆ ಅನುಮಾನವೇ ಬೇಡ ಎಂದು ಹೇಳಿದರು.
ಕರ್ನಾಟಕದ ಪ್ರಥಮ ಬೈಠಕ್:
ಇದುವರೆಗೆ ರಾಜ್ಯದಲ್ಲಿ ಎಲ್ಲೂ ಅಕ್ರಮ ಸಕ್ರಮ ಬೈಠಕ್ ನಡೆದಿಲ್ಲ. ಮೊದಲ ಬಾರಿಗೆ ಪುತ್ತೂರಿನಲ್ಲಿ ಬೈಠಕ್ ನಡೆದ ಅಂಗವಾಗಿ 12 ಕಡತಗಳನ್ನು ವಿಲೇವಾರಿ ಮಾಡಲಾಗುತ್ತದೆ. ಕಂದಾಯ ಸಚಿವರ ಬಳಿ ಒತ್ತಡ ತಂದು ಈ ಕಾರ್ಯವನ್ನು ಮಾಡುತ್ತಿದ್ದೇನೆ. 94 ಸಿ ಹಕ್ಕು ಪತ್ರ ಅರ್ಜಿ ಹಾಕಿದ ಎಲ್ಲರಿಗೂ ದೊರೆಯಲಿದೆ ಎಂದು ಹೇಳಿದರು.
ಒಟ್ಟು 19 ಮಂದಿಗೆ 94 ಸಿ ಹಕ್ಕು ಪತ್ರವನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಶಾಸಕರು ತಿಳಿಸಿದ್ದು ಇದುವರೆಗೆ ಒಟ್ಟು 2400 ಹಕ್ಕು ಪತ್ರ ವಿತರಣೆ ನಡೆದಿದೆ ಎಂದು ಶಾಸಕರು ಹೇಳಿದರು.
ಅಕ್ರಮ ಸಕ್ರಮ ಫೈಲು ವಿಲೇವಾರಿ ಮಾಡುವಾಗ ಯಾರಾದರು ಲಂಚ ಕೇಳಿದ್ರೆ ತಕ್ಷಣ ನನ್ನ ಗಮನಕ್ಕೆ ತನ್ನಿ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು.
ಇಷ್ಟು ವರ್ಷಗಳಲ್ಲಿ ಅಕ್ರಮ ಸಕ್ರಮ ಕಡತಗಳು ಮ್ಯಾನುವಲ್ ಆಗಿಯೇ ಮಾಡಲಾಗುತ್ತಿತ್ತು ಇದನ್ನು ಕಳೆದ ಅವಧಿಯ ಬಿಜೆಪಿ ಸರಕಾರ ಆ್ಯಪ್ ಜಾರಿಗೆ ತಂದಿದ್ದು ಅದರ ಮೂಲಕ ಅಕ್ರಮ ಸಕ್ರಮ ಸಿಟ್ಟಿಂಗ್ ನಡೆಸಲಾಗುತ್ತದೆ. ಹೊಸ ಅ್ಯಾಪ್ ನಿಂದ ಜನರಿಗೆ ತೊಂದರೆಯಾಗುತ್ತದೆಯಾದರೂ ಸರಕಾರಿ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲೂ ಈ ಕಾನೂನು ಸಹಕಾರಿಯಾಗಲಿದೆ ಎಂದು ಸಮಿತಿ ಸದಸ್ಯ ಮಹಮದ್ ಬಡಗನ್ನೂರು ಹೇಳಿದರು.
ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ಮಾತನಾಡಿ, ಅಕ್ರಮ ಸಕ್ರಮ ಬೈಠಕ್ ಒಳ್ಳೆಯ ಯೋಜನೆಯಾಗಿದೆ . ಸರಕಾರಜನ ಪರ ಇದೆ ಮತ್ತು ಶಾಸಕರು ಬಡವರ ಎಂಬುದಕ್ಕೆ ಇಂಥಹ ಯೋಜನೆಗಳೇ ಸಾಕ್ಷಿಯಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರಾಮಣ್ಣ ಪಿಲಿಂಜ, ರೂಪರೇಖ ಆಳ್ವ, ಗ್ರಾಪಂ ಉಪಾಧ್ಯಕ್ಷ ರಾಮಕ್ಕೆ ಮೇನಾಲ, ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು. ಗ್ರಾಪಂ ಆಡಳಿತಾಧಿಕಾರಿ ರಾಧಾಕೃಷ್ಣ ಸ್ವಾಗತಿಸಿದರು.