ಗೋವಾ: ಇಂದು, ನೇಪಾಳದಲ್ಲಿ ಬಹುಸಂಖ್ಯಾತ ಹಿಂದೂ ಸಮಾಜವಿದ್ದರೂ ಹಿಂದೂಗಳು ಮಾತ್ರ ಚೀನಾ, ಯುರೋಪ ಯೂನಿಯನ ಮುಂತಾದ ವಿದೇಶಿ ಶಕ್ತಿಗಳ ಆರ್ಥಿಕ ಸಹಾಯದಿಂದಾಗಿ ಅವರ ಆಲೋಚನೆಗಳಿಗೆ ಅನುಗುಣವಾಗಿ ಕಾರ್ಯ ಮಾಡುತ್ತಿದ್ದಾರೆ ಎಂದು ನೇಪಾಳದ ವಿಶ್ವ ಹಿಂದೂ ಮಹಾಸಂಘದ ಹಿರಿಯ ಉಪಾಧ್ಯಕ್ಷ ಶಂಕರ ಖರಾಲ ಆರೋಪಿಸಿದ್ದಾರೆ.
ಅವರು ಗೋವಾ ಪೋಂಡಾ `ಶ್ರೀ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಂಗಣದಲ್ಲಿ ಆಯೋಜಿಸಲಾದ ಜಾಗತಿಕ ಮಟ್ಟದ ಹಿಂದೂ ಸಂಘಟನೆ ವಿಷಯದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭಾರತದ ಮೂಲಭೂತವಾದಿ ಎಡಪಂಥೀಯ ಸಿದ್ಧಾಂತದ ಕೆಲವು ವಿಶ್ವವಿದ್ಯಾಲಯಗಳಿಂದ ಹಿಂದೂವಿರೋಧಿ ಸಿದ್ಧಾಂತದ ಕಾರ್ಯಕರ್ತರು ನೇಪಾಳಕ್ಕೆ ಬಂದು ಹಿಂದೂವಿರೋಧಿ ಹಾಗೂ ನಕ್ಸಲವಾದಿ ಕಾರ್ಯ ಮಾಡುತ್ತಿದ್ದಾರೆ. ಆದರೂ ನೇಪಾಳದಲ್ಲಿ ಮೊದಲಿಗಿಂತ ಹಿಂದೂ ಸಂಘಟನೆಗಳು ಹೆಚ್ಚಿವೆ. ಹಿಂದುತ್ವಕ್ಕಾಗಿ ಕೆಲಸ ಮಾಡುವ ಪಕ್ಷವನ್ನು ಎಲ್ಲಾ ಹಿಂದೂಗಳು ಬೆಂಬಲಿಸುತ್ತಿದ್ದಾರೆ. ನೇಪಾಳವು ಹುರುಪಿನಿಂದ ಹಿಂದೂ ರಾಷ್ಟ್ರದ ದಿಕ್ಕಿನಲ್ಲಿ ಮುಂದೆ ಸಾಗುತ್ತಿದೆಯೆಂದು ಎಂದು ಹೇಳಿದರು.
ಅಮೇರಿಕಾದ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸೈನ್ಸ್ ನ ಡಾ.ನಿಲೇಶ ಓಕ್ ಮಾತನಾಡಿ, ಹಿಂದೂ ಧರ್ಮದ ವಿಜ್ಞಾನವನ್ನು ಮೂಢನಂಬಿಕೆ ಎಂದು, ಹಾಗೆಯೇ ರಾಮ-ಕೃಷ್ಣಾದಿ ಅವತಾರಗಳು ಕಾಲ್ಪನಿಕವಾಗಿವೆ ಎಂದು ಅಪಪ್ರಚಾರ ಮಾಡಲಾಗುತ್ತದೆ. ವಾಸ್ತವವಾಗಿ ಇಂದಿನ ಆಧುನಿಕ ವಿಜ್ಞಾನದ, ಖಗೋಳಶಾಸ್ತ್ರದ ಆಧಾರದ ಮೇಲೆ ಅವುಗಳ ಕಾಲಾವಧಿಯನ್ನು ನಿರ್ಧರಿಸಬಹುದು. ಆದ್ದರಿಂದ ವಿಜ್ಞಾನದ ಆಧಾರದಲ್ಲಿ ಈ ಅಪ ಪ್ರಚಾರಗಳಿಗೆ ಉತ್ತರ ನೀಡುವುದು ಮತ್ತು ಹಿಂದೂ ಧರ್ಮದ ಶ್ರೇಷ್ಠತೆಯನ್ನು ಸಾಬೀತುಪಡಿಸುವುದು ಸುಲಭ ಸಾಧ್ಯವಿದೆ. ಆ ದೃಷ್ಟಿಯಿಂದ ಪ್ರತಿಯೊಬ್ಬರೂ ಸನಾತನ ಧರ್ಮವನ್ನು ಕಲಿಯಲು ತಮ್ಮ ಮನೆಗಳಿಂದಲೇ ವಿಶೇಷವಾಗಿ ಚಿಕ್ಕ ಮಕ್ಕಳಿಂದ ಪ್ರಾರಂಭಿಸಬೇಕು ಎಂದರು.
ಇಂಡೋನೇಷ್ಯಾದ ಬಾಲಿಯಿಂದ ರಸ ಆಚಾರ್ಯ ಡಾ.ಧರ್ಮಯಶ ಅವರು ಮಾತನಾಡುತ್ತಾ, `ನಮ್ಮ ಮುಂದಿನ ಪೀಳಿಗೆಯೇ ನಮ್ಮ ಭವಿಷ್ಯವಾಗಿದೆ. ಅವರಿಗೆ ನಾವು ಭಗವದ್ಗೀತೆ, ರಾಮಾಯಣ ಮತ್ತು ವೈದಿಕ ಸಂಪ್ರದಾಯಗಳ ಶಿಕ್ಷಣವನ್ನು ನೀಡಿ ಪ್ರಾಚೀನ ಸಂಸ್ಕೃತಿಯನ್ನು ಕಲಿಸಬೇಕು. ಆಗ ನಾವು ನಮ್ಮ ಉತ್ತಮ ಭವಿಷ್ಯವನ್ನು ನೋಡಬಹುದು, ಎಂದರು.
ಆಫ್ರಿಕಾದ `ಇಸ್ಕಾನ್’ ನ ಶ್ರೀವಾಸ ದಾಸ ವನಚಾರಿ ತಮ್ಮ ಸಂದೇಶದಲ್ಲಿ, `ಜಾಗತಿಕ ಮಟ್ಟದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸುವ ಪ್ರಮಾಣ ಹೆಚ್ಚಾಗಿದೆ. ಹಿಂದೂ ಧರ್ಮಗ್ರಂಥಗಳನ್ನು ಅಭ್ಯಾಸ ಮಾಡಲಾಗುತ್ತದೆ. ಭಗವದ್ಗೀತೆಯ ಅದ್ಭುತ ಜ್ಞಾನವನ್ನು ಅರಿತುಕೊಂಡ ನಂತರ ಘಾನಾ (ದಕ್ಷಿಣ ಆಫ್ರಿಕಾ) ದ ಅನೇಕ ಚರ್ಚ್‌ಗಳಲ್ಲಿ ಫಾದರಗಳಿಂದ ಗೀತೆಯ ಜ್ಞಾನವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಯೂತ್ ಫಾರ್ ಪನೂನ ಕಾಶ್ಮೀರ ಸಂಘಟನೆಯ ದೆಹಲಿಯ ಅಧ್ಯಕ್ಷ ವಿಠ್ಠಲ ಚೌಧರಿ ಮಾತನಾಡಿ, ಇಂದಿಗೂ ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಕಾಶ್ಮೀರದ ನಂತರ ಈ ಭಯೋತ್ಪಾದಕರ ದಾಳಿಗಳು ಜಮ್ಮುವಿನತ್ತ ವಾಲಿದೆ. ‘ಪನೂನ ಕಾಶ್ಮೀರ’ ರಚನೆಯ ಮೂಲಕ ಕಾಶ್ಮೀರಿ ಪಂಡಿತರ ಪುನರ್ವಸತಿ ಸಾಧ್ಯವಿದೆ. ಈ ‘ಪನೂನ ಕಾಶ್ಮೀರ’ ಸ್ಥಾಪನೆಯಲ್ಲಿ ಭಾರತೀಯ ಮತ್ತು ಸನಾತನ ಹಿಂದೂ ಧರ್ಮೀಯರು ಪ್ರಮುಖ ಪಾತ್ರ ವಹಿಸುವರು. ಕಾಶ್ಮೀರದ ಸಮಸ್ಯೆಯ ಕುರಿತು ಮಾರ್ಗವನ್ನು ಕಂಡು ಹಿಡಿಯಲು ಯಾವ ರೀತಿ ಹಿಂದೂಗಳೆಲ್ಲ ಒಗ್ಗೂಡಿ ಏಕ ಭಾರತ ಅಭಿಯಾನ, ಚಲೋ ಕಾಶ್ಮೀರ ಕಿ ಓರ್ ಎಂಬ ಅಭಿಯಾನ ನಡೆಸಿದ್ದರೋ ಅದನ್ನು ಮತ್ತೊಮ್ಮೆ ಜಾರಿಗೆ ತರುವ ಆವಶ್ಯಕತೆಯಿದೆ. ಕಾಶ್ಮೀರಿ ಹಿಂದೂಗಳ ನರಮೇಧವನ್ನು ಒಪ್ಪಿಕೊಂಡು, ಸರಕಾರ ಕಾಶ್ಮೀರಿ ಹಿಂದೂಗಳ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು ಎಂದರು.
ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಮಾತನಾಡಿ, ಭಾರತವನ್ನು ತೊರೆದು ಹೋಗಿರುವ ಜನರು ಮತ್ತೆ ಭಾರತಕ್ಕೆ ಮರಳುತ್ತಿದ್ದಾರೆ. ಇತರ ಧರ್ಮದ ಜನರು ದೊಡ್ಡ ಪ್ರಮಾಣದಲ್ಲಿ ಸನಾತನ ಧರ್ಮದತ್ತ ಮುಖ ಮಾಡುತ್ತಿದ್ದಾರೆ. ಕೇವಲ ಭಾರತೀಯ ಯೋಗ, ಅಧ್ಯಾತ್ಮ, ಆಯುರ್ವೇದ ಮಾತ್ರವಲ್ಲ ಬದಲಾಗಿ ಸಮೃದ್ಧ ಮತ್ತು ಪರಿಪೂರ್ಣ ಸನಾತನ ಭಾರತೀಯ ಜ್ಞಾನದಿಂದಾಗಿ ಅವರು ಪ್ರಭಾವಿತರಾಗಿ ಸನಾತನ ಧರ್ಮದ ಕಡೆಗೆ ಆಕರ್ಷಿಸಲ್ಪಡುತ್ತಿದ್ದಾರೆ. ಸಮಾಧಾನವನ್ನು ಪಡೆಯಲು ಭಾರತೀಯ ಸಂಸ್ಕೃತಿಯಂತೆ ಆಚರಣೆ ಮಾಡುತ್ತಿದ್ದಾರೆ. ಭಾರತೀಯ ಸಂಸ್ಕೃತಿಯು ಜಾಗತಿಕ ಮಟ್ಟದಲ್ಲಿ ಎಲ್ಲ ಧರ್ಮಗಳನ್ನು ಒಗ್ಗೂಡಿಸಲು ಸಾಧ್ಯವಿದೆ. ಅದನ್ನು ಪ್ರಸಾರ ಮಾಡುವುದು ಅವಶ್ಯಕವಿದೆ. ಆದ್ದರಿಂದಲೇ ` ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.