ಮಾಸ್ಕೊ: ರಷ್ಯಾದ ಮೇಲೆ ಉಗ್ರ ದಾಳಿಯಾಗಿದೆ. ಉಗ್ರರು ಯಹೂದಿಗಳ ಪ್ರಾರ್ಥನಾ ಮಂದಿರ ಹಾಗೂ ಎರಡು ಆರ್ಥಡಾಕ್ಸ್ ಚರ್ಚ್ ಮೇಲೆ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳ ಮೇಲೂ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಚರ್ಚ್ ಪಾದ್ರಿಯ ಶಿರಚ್ಛೇದ ಮಾಡಿದ್ದಾರೆ. ಭೀಕರ ದಾಳಿಯಲ್ಲಿ ಪಾದ್ರಿ, ಪೊಲೀಸರು ಸೇರಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. 40ಕ್ಕೂ ಹೆಚ್ಚು ಮಂದಿಯನ್ನು ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.
ಉತ್ತರ ರಷ್ಯಾದ ಕೌಕಾಸ್ ವಲಯದಲ್ಲಿ ಈ ದಾಳಿ ನಡೆದಿದೆ. ಪ್ರತಿ ದಾಳಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಆದರೆ ಇನ್ನುಳಿದ ಉಗ್ರರು 40ಕ್ಕೂ ಹೆಚ್ಚಿನ ಮಂದಿಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಯಹೂದಿಗಳ ಪ್ರಾರ್ಥನಾ ಮಂದಿರ ಹಾಗೂ ಆರ್ಥಡಾಕ್ಸ್ ಚರ್ಚ್ ಟಾರ್ಗೆಟ್ ಮಾಡಿದ ಉಗ್ರರು ಗನ್ ಮೂಲಕ ಗುಂಡಿನ ಸುರಿಮಳೆಗೈದಿದ್ದಾರೆ. ಗುಂಡಿನ ದಾಳಿಯಲ್ಲಿ ಯಹೂದಿಗಳ ಪ್ರಾರ್ಥನಾ ಮಂದಿರ, ಆರ್ಥಡಾಕ್ಸ್ ಚರ್ಚ್ ಹೊತ್ತಿ ಉರಿದಿದೆ. ರಷ್ಯಾ ಇತ್ತೀಚಿನ ದಿನಗಳಲ್ಲಿ ಎದುರಿಸಿದ ಭೀಕರ ಉಗ್ರರ ದಾಳಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭದ್ರತಾ ಸಿಬ್ಬಂದಿಗಳು ಪ್ರತಿ ದಾಳಿ ನಡೆಸಿ ನಾಲ್ವರು ಉಗ್ರರನ್ನು ಕೊಂದು ಹಾಕಿದ್ದಾರೆ. ಆದರೆ ಉಗ್ರರ ಪ್ರಬಲ ಗುಂಡಿನ ದಾಳಿಗೆ ಪೊಲೀಸರು, ಸಾರ್ವಜನಿಕರು ಸೇರಿದಂತೆ 15 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇತ್ತ ಚರ್ಚ್ ಒಳನುಗ್ಗಿದ ಉಗ್ರರು, ಚರ್ಚ್ ಪಾದ್ರಿಯ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಭೀಕರ ಘಟನೆಯಿಂದ ಉತ್ತರ ರಷ್ಯಾದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ರಷ್ಯಾ ಸೇನೆ ಸ್ಥಳಕ್ಕೆ ಧಾವಿಸಿದ್ದು ಇಡೀ ಪ್ರದೇಶ ಸುತ್ತುವರಿದಿದೆ. ಉಗ್ರರ ವಿರದ್ದ ಪ್ರತಿ ದಾಳಿ ನಡೆಸಿ ನಿರ್ನಾಮ ಮಾಡುವುದಾಗಿ ರಷ್ಯಾ ಘೋಷಿಸಿದೆ.