ಹೊಸದಿಲ್ಲಿ: ದಕ್ಷಿಣ ಕನ್ನಡ ಜಿಲ್ಲಾ ಸಂಸದ ಬ್ರಿಜೇಶ್ ಚೌಟ ಅವರು ಸೋಮವಾರ ಪ್ರಮಾನವಚನ ಸ್ವೀಕಾರ ಮಾಡಿದರು. ಅವರು ಕನ್ನಡ ಭಾಷೆಯಲ್ಲಿ ತುಳುನಾಡಿನ ಎಲ್ಲ ದೈವ ದೇವರುಗಳ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸೋಮವಾರ ಸಂಸತ್ನಲ್ಲಿ ಮೊದಲ ಲೋಕಸಭೆ ಅಧಿವೇಶನ ಆರಂಭವಾಗಿದ್ದು, ಪದ್ಧತಿಯಂತೆ ಎಲ್ಲಾ ನೂತನ ಸದಸ್ಯರಿಗೆ ಹಂಗಾಮಿ ಸ್ಪೀಕರ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಬೋಧಿಸಲಾಯಿತು.
ಪ್ರಮಾಣ ವಚನದದ ಕೊನೆಯಲ್ಲಿ “ಮಾತೆರೆಗ್ಲಾ ಸೋಲೈಲು” (ಎಲ್ಲರಿಗೂ ಧನ್ಯವಾದಗಳು) ಎಂದು ತುಳುವಿನಲ್ಲಿ ಹೇಳುವ ಮೂಲಕ ತುಳು ಭಾಷೆಯ ಬಗೆಗಿನ ತನ್ನ ಪ್ರೇಮವನ್ನು ಪ್ರಕಟಪಡಿಸಿದರು. ಅವರು ಚುನಾವಣೆಯ ಸಂದರ್ಭ ನಾಮಪತ್ರ ಸಲ್ಲಿಕೆ ವೇಳೆ ನಡೆಸಿದ ಮೆರವಣಿಗೆಯಲ್ಲೂ ತುಳು ಧ್ವಜ ಹಿಡಿಯುವ ಮೂಲಕ ತುಳು ಪ್ರೇಮವನ್ನು ಸಾದರಪಡಿಸಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಂಗಾಮಿ ಸ್ಪೀಕರ್ ಭರ್ತೃಹರಿ ಮೆಹತಾಬ್ ಅವರ ಸಮ್ಮುಖದಲ್ಲಿ ಸಂಪ್ರದಾಯದಂತೆ ನರೇಂದ್ರ ಮೋದಿ ಅವರು ಕೂಡಾ ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೂನ್ 9 ರಂದು ನರೇಂದ್ರ ಮೋದಿ ಸತತವಾಗಿ ಮೂರನೇ ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.
2024 ಲೋಕಸಭೆ ಚುನಾವಣಾ ಫಲಿತಾಂಶದಿಂದಾಗಿ ಸಂಸತ್ನಲ್ಲಿ ವಿರೋಧ ಪಕ್ಷಗಳು ಶಕ್ತಿ ವೃದ್ಧಿಸಿಕೊಂಡಿವೆ. ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಸಂತತ್ ಅಧಿವೇಶನ ಕುತೂಹಲಕ್ಕೆ ಕಾರಣವಾಗಿದೆ.
ಲೋಕಸಭೆಯಲ್ಲಿ ಈ ಬಾರಿ ಆಡಳಿತ ಪಕ್ಷದ ವಿರುದ್ಧ ಹಲವು ಅಸ್ತ್ರಗಳನ್ನು ಪ್ರಯೋಗ ಮಾಡಲು ವಿರೋಧ ಪಕ್ಷಗಳು ಮುಂದಾಗಿವೆ. ಸಂಸತ್ ಆವರಣದಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಳ್ಳುವ ಮೂಲಕ ಹೋರಾಟದ ಮುನ್ಸೂಚನೆಯನ್ನು ವಿರೋಧ ಪಕ್ಷಗಳು ನೀಡಿವೆ.