ಪುತ್ತೂರು: ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಯೋಗ ಅತ್ಯಗತ್ಯ. ಯೋಗದ ಯಾವುದೇ ಪ್ರಕಾರಗಳಿರಲಿ ಆಸನ, ಪ್ರಾಣಾಯಾಮ, ಏಕಾಗ್ರತೆಯೊಂದಿಗೆ ಮಾಡುವ ಧ್ಯಾನ ಎಲ್ಲದರಲ್ಲೂ ಮೂಲವಾಗಿರುವಂತಹದ್ದು ಉಸಿರಾಟ. ಉಸಿರಾಟ ಶರೀರದ ಎಲ್ಲ ಕೆಲಸಗಳನ್ನು ನಿಯಂತ್ರಿಸುವುದು, ಶರೀರ ಮತ್ತು ಮನಸ್ಸಿನ ಏರುಪೇರನ್ನು ನಿಯಂತ್ರಿಸುವುದು. ಯೋಗವು ಆಸನ, ಪ್ರಾಣಾಯಾಮ, ಧ್ಯಾನ, ಆಹಾರ ಪದ್ಧತಿ, ಜೀವನ ಶೈಲಿ ಎಲ್ಲವನ್ನು ಒಳಗೊಂಡಿರುವುದು ಎಂದು ಯೋಗಾರೋಗ್ಯ ಸಂಸ್ಥೆಯ ಚಿಕಿತ್ಸಕ, ಯೋಗ ತಜ್ಞ ಡಾ. ಉದಯ ಕುಮಾರ್ ಕೆ. ಹೇಳಿದರು.
ಅವರು ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯೋಗದಿಂದ ರೋಗ ನಿವಾರಣೆ ಖಂಡಿತ ಸಾಧ್ಯ, ಏಕೆಂದರೆ ಕಾರಣ ಕಂಡುಹಿಡಿದು ಆರೋಗ್ಯ ಸಮಸ್ಯೆಯನ್ನು ನಿವಾರಿಸುವುದು ಯೋಗದಿಂದ ಸಾಧ್ಯ. ಎಲ್ಲರೂ ಇದನ್ನರಿತು ಯೋಗ ಮಾಡಿ. ವಿಶ್ವದ 177 ದೇಶಗಳು ವಿಶ್ವ ಯೋಗ ದಿನವನ್ನು ಆಚರಿಸುವ ಸಲಹೆಗೆ ಒಮ್ಮತದಿಂದ ಒಪ್ಪಿಗೆ ನೀಡಿರುವಂತಹದ್ದು ಐತಿಹಾಸಿಕ ದಾಖಲೆಯಾಗಿದೆ ಎಂದು ಹೇಳಿದರು.
ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಅತಿಥಿಗಳನ್ನು ಸ್ಮರಣೆಕೆ ನೀಡಿ ಗೌರವಿಸಿದರು. ವಿದ್ಯಾರ್ಥಿಗಳು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಉಪಸ್ಥಿತರಿದ್ದರು.
ಉಪನ್ಯಾಸಕಿ ವರ್ಷಾ ಮೊಳೆಯಾರ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ್ ಸಹಕರಿಸಿದರು.