ಪುತ್ತೂರು: ಯೋಗಾಭ್ಯಾಸ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಸಾಧನ. ಯೋಗದ ನಿರಂತರ ಅಭ್ಯಾಸದಿಂದ ಮನೋನಿಯಂತ್ರಣ, ಇಂದ್ರಿಯ ನಿಗ್ರಹ, ಅಧಿಕ ಕಾರ್ಯೋತ್ಸಾಹ ಮೊದಲಾದ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬಹುದು. ಪಾರಮಾರ್ಥಿಕ ಸತ್ಯದೆಡೆಗೆ, ಆತ್ಮದ ಅರಿವನ್ನು ಪಡೆಯುವುದರೆಡೆಗೆ ಸಾಗಲು ಮನುಷ್ಯರಿಗೆ ನೆರವಾಗುವಂತದ್ದೆಲ್ಲವೂ ಯೋಗವೇ ಎಂದು ಪುತ್ತೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯೋಗಶಿಕ್ಷಕಿ ಶರಾವತಿ ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ವಿಶ್ವಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಯೋಗದ ಪ್ರಾಮುಖ್ಯತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಮಾತನಾಡಿ, ,ವಾಸ್ತವವಾಗಿ ಯೋಗ ಎಂಬುದು ಶರೀರ, ಮನಸ್ಸು ಮತ್ತು ಆತ್ಮದ ಒಂದು ಕನ್ನಡಿಯಾಗಿ ವರ್ತಿಸುತ್ತದೆ. ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಜೀವನದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದ, ಸಂತೋಷ, ಯಶಸ್ಸು ಎಲ್ಲವೂ ಕೈಗೂಡಬೇಕೆಂದರೆ ಯೋಗಾಭ್ಯಾಸವು ಅನಿವಾರ್ಯವಾಗಿದೆ ಎಂದು ಹೇಳಿದರು.
ಬಳಿಕ ಯೋಗ ಶಿಕ್ಷಕಿ ಶರಾವತಿ ವಿವಿಧ ಯೋಗಾಸನದ ಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿನಿ ಆಶಿಕಾ ರಾವ್ ಸ್ವಾಗತಿಸಿ, ವಂದಿಸಿದರು.