ಜಮ್ಮು-ಕಾಶ್ಮೀರ: 10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ 3ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರ ತೀರದಲ್ಲಿ ಸಾವಿರಾರು ಜನರೊಂದಿಗೆ ಪಾಲ್ಗೊಂಡು ಯೋಗ ಪ್ರದರ್ಶಿಸಿದರು.
ಈ ಬಾರಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ವಸ್ತು ವಿಷಯದಡಿ ಆಚರಿಸಲಾಗುತ್ತಿದ್ದು, ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುವುದು ಉದ್ದೇಶವಾಗಿದೆ.
3ನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಮೋದಿ ಅವರು, ಶ್ರೀನಗರದ ದಾಲ್ ಸರೋವರದ ತೀರದಲ್ಲಿನ ಶೇರ್-ಐ-ಕಾಶ್ಮೀರ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಯೋಗ ಪ್ರದರ್ಶನ ನೀಡಿದರು. ಇದರೊಂದಿಗೆ ಸುಮಾರು 7 ಸಾವಿರ ಮಂದಿ ಪಾಲ್ಗೊಂಡು ವಿಶ್ವಕ್ಕೆ ಆರೋಗ್ಯ ಜಾಗೃತಿಯ ಸಂದೇಶ ಸಾರಿದರು.