ಬೆಂಗಳೂರು : ಸ್ವಾತಂತ್ರೋತ್ಸವ ದಿನಾಚರಣೆ ಸಂದರ್ಭದಲ್ಲಿ ಸರಕಾರಿ ಶಾಲಾ-ಕಾಲೇಜು, ಸರಕಾರಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮಹಾತ್ಮಾ ಗಾಂಧಿ ಜತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಡಬೇಕು. ಹೀಗೆಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗಣರಾಜ್ಯೋತ್ಸವ ದಿನದೊಂದಿಗೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ, ನವೆಂಬರ್ 26ರ ಸಂವಿಧಾನದ ದಿನಾಚರಣೆ ವೇಳೆ ರಾಜ್ಯದ ಎಲ್ಲ ಸರಕಾರಿ ಕಚೇರಿ, ಸರಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ ಶಾಲಾ-ಕಾಲೇಜು ಸೇರಿ ಸರಕಾರದ ವತಿಯಿಂದ ನಡೆಯುವ ಎಲ್ಲ ಸಮಾರಂಭಗಳಲ್ಲಿ ಮಹಾತ್ಮಗಾಂಧೀಜಿ ಭಾವಚಿತ್ರದೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಹ ಕಡ್ಡಾಯವಾಗಿಡಲು ಸಂಪುಟ ಸಭೆ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.