ಮಂಗಳೂರು: ರಾಜ್ಯ ಸರಕಾರ ತೈಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ರಾಜ್ಯ ಸರಕಾರದ ವಿರುದ್ಧ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗದೆ ಮತ್ತು ವಾಲ್ಮೀಕಿ ನಿಗಮದ ಭ್ರಷ್ಟಾಚಾರದಂತಹ ಅವ್ಯವಸ್ಥೆಗಳಿಂದ ಕಂಗೆಟ್ಟು ಹೋಗಿರುವ ಕಾಂಗ್ರೆಸ್ ಸರಕಾರ ಹಣವನ್ನು ಸರಿದೂಗಿಸಲು ಸಾಮಾನ್ಯ ಜನರ ಕಿಸೆಗೆ ಕನ್ನ ಹಾಕುತ್ತಿರುವುದು ಖಂಡನೀಯ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಪ್ರತಿಭಟನೆ ಅಂಗವಾಗಿ ಪಿವಿಎಸ್ ಸರ್ಕಲ್ ನಲ್ಲಿ ಕೆಲಕಾಲ ರಸ್ತೆ ಸಂಚಾರಕ್ಕೆ ತಡೆ ಮಾಡಲಾಯಿತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಪ್ರತಿಭಟನೆಯಿಂದಾಗಿ ಪಿವಿಎಸ್ ಬಳಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.