ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ ನ ಆರೋಪಿಗಳಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರಾ ಗೌಡ, ವಿನಯ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಪೊಲೀಸರು ವಿವಿಧ ರೀತಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಇಂದು ಮಧ್ಯಾಹ್ನದ ನಂತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಆಗಿದ್ದು, ಜೂನ್ 11ರ ಮುಂಜಾನೆಯೇ ದರ್ಶನ್ ಅವರನ್ನು ಬಂಧಿಸಲಾಯಿತು. ಆ ಬಳಿಕ ಪವಿತ್ರಾ ಗೌಡ ಸೇರಿ ಹಲವರ ಬಂಧನ ಆಯಿತು. ಅನುಮಾನ ಇರುವ ಎಲ್ಲರನ್ನೂ ಪೊಲೀಸರು ಬಂಧಿಸಿದರು. ಎರಡನೇ ಬಾರಿಗೆ ಪೊಲೀಸ್ ಕಸ್ಟಡಿ ಅಂತ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ 24 ನೇ ಎಸಿಎಂಎಂ ನ್ಯಾಯಾಲಯದ ಎದುರು ಆರೋಪಿಗಳನ್ನು ಪೊಲೀಸರು ಹಾಜರು ಪಡಿಸಲಿದ್ದಾರೆ.
ಪ್ರಕರಣ ಸಂಬಂಧ ದರ್ಶನ್ ಹಾಗೂ ತಂಡವನ್ನು ಎರಡು ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಾಗಿದೆ. ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಸ್ಥಳ ಮಹಜರು ಸೇರಿ ಹಲವು ಮಹತ್ವದ ಸಾಕ್ಷ್ಯ ಕಲೆ ಹಾಕಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ವಹಿಸುವಂತೆ ಪೊಲೀಸರ ಮನವಿ ಮಾಡುವ ಸಾಧ್ಯತೆ ಇದೆ.