ಹೊಸದಿಲ್ಲಿ: ಪ್ರತಿವರ್ಷ ಜೂನ್ 21ರ ದಿನವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿಯದ್ದು 10ನೇ ಅಂತಾರಾಷ್ಟ್ರೀಯ ಯೋಗ ದಿನ. ಈ ವರ್ಷದ ಥೀಮ್ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂದಾಗಿದೆ.
ಜೂನ್ 21ರಂದು ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಸನ ಮಾಡಲಿದ್ದಾರೆ. ಇಂದೇ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದು ಅಲ್ಲಿ ಎರಡು ದಿನಗಳ ಕಾರ್ಯಕ್ರಮ ನಿಗದಿಯಾಗಿದೆ. ಶಿಲಾನ್ಯಾಸ, ಯೋಜನೆಗಳ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳು ಎರಡು ದಿನಗಳಲ್ಲಿ ನಡೆಯಲಿವೆ. ರಸ್ತೆ ಇನ್ನಿತರ ಯೋಜನೆಗಳು ಸೇರಿ ಸುಮಾರು 1500 ಕೋ. ರೂ. ಮೊತ್ತದ ಯೋಜನೆಗಳನ್ನು ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ನಾಳೆ ದೇಶದ ವಿವಿಧ ಭಾಗಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಸುಮಾರು 7 ಸಾವಿರಕ್ಕೂ ಹೆಚ್ಚು ಜನ ಆಗಮಿಸಲಿದ್ದಾರೆ. ದಾಲ್ ಸರೋವರದ ದಡದಲ್ಲಿ ಯೋಗ ದಿನ ಆಚರಿಸಲು ನಿರ್ಧರಿಸಲಾಗಿದೆ. ಮುಖ್ಯ ಕಾರ್ಯಕ್ರಮ ಶ್ರೀನಗರದ ಶೇರ್- ಇ-ಕಾಶ್ಮೀರ್ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ನಡೆಯಲಿದೆ.
ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಭಾರತೀಯ ಯೋಗ ಪರಂಪರೆಯಿಂದ ವಿಶ್ವವ್ಯಾಪಿಯಾಗಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿಸುವ ಮಹತ್ವದ ಕಾರ್ಯವಾಗಿ ರೂಪುಗೊಂಡಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ ಎನ್ನುವ ನಿಟ್ಟಿನಲ್ಲಿ ಸಾಕಾರಗೊಂಡಿದೆ.