ಕಡಬ : ಪರಿಶಿಷ್ಟರ ಹಣ ಬಳಸಿಕೊಂಡು ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯ ನೀಡುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರಿಗೂ ದುಪ್ಪಟ್ಟು ಬೆಲೆ ತೆರಬೇಕಾಗಿದೆ. ಬೆಲೆ ಏರಿಸಿಕೊಂಡ ಸರ್ಕಾರ ನಿದ್ದೆ ಮಾಡುತ್ತಿದೆ. ಹೋರಾಟ ನಮಗೆ ಹೊಸದಲ್ಲ, ರಸ್ತೆಗಿಳಿದು ಮುಂದಿನ ದಿನ ಕಡಬದಲ್ಲೂ ಪ್ರತಿಭಟಿಸಲಾಗುವುದು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.
ಕಡಬದಲ್ಲಿ ಜೂ.19ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದು ಇದರಿಂದಾಗಿ ರೈತರಿಗೆ ತೊಂದರೆಯಾಗಲಿದೆ, ಬೆಲೆ ತಗ್ಗಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದರು.
ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಚುನಾವಣೆಯ ಸಂದರ್ಭ ಕಾಂಗ್ರೆಸ್ ನವರು ಚೆಂಬು ನ ಚಿತ್ರ ಬಳಸಿ ಜಾಹೀರಾತು ನೀಡಿದ್ದರು. ಅದೇ ಚೆಂಬನ್ನು ಇಂದು ಬೆಲೆ ಏರಿಕೆ ಮಾಡುವುದರ ಮೂಲಕ ಜನರ ಕೈಗೆ ಕಾಂಗ್ರೆಸ್ ನೀಡಿದೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಪ್ರತಿಯೊಂದು ಕೆಲಸ ಕಾರ್ಯಕ್ಕೆ ಹೊರೆಯಾಗಲಿದೆ. ಇದು ಆಗಬಾರದು, ಸರ್ಕಾರ ಅನುದಾನ ನೀಡದ ಕಾರಣ ಸುಳ್ಯ ಕ್ಷೇತ್ರದಲ್ಲೂ ಯಾವುದೇ ಅಭಿವೃದ್ದಿ ಆಗಿಲ್ಲ. ರೈತರಿಗೆ ಸಿಗಬೇಕಾದ ಹಾಲಿನ ಸಬ್ಸಿಡಿ, ಕಂದಾಯ ಇಲಾಖೆಯ ಜಾಗ ನೋಂದಣಿ ಶುಲ್ಕ ಸಹಿತ ಹಲವು ಶುಲ್ಕ ಹೆಚ್ಚಳವಾಗಿದೆ. ಅನುದಾನ ಬಿಡುಗಡೆಗೊಳಿಸುವ ಮೂಲಕ ಶಾಸಕರಿಗೆ ಗೌರವ ಕೊಡಬೇಕೆಂದರು. ಪತ್ರಿಕಾಗೋಷ್ಟಿಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು