ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ದರ್ಶನ್ ಜತೆಗೆ ಪತ್ನಿ ವಿಜಯಲಕ್ಷ್ಮೀಗೂ ಈ ಕಂಟಕ ಕಾಡಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದರೆ, ಗೆಳತಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ. ಆದರೆ, ಈ ಪ್ರಕರಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಎ1 ಆರೋಪಿಯಾಗಿದ್ದು, ದರ್ಶನ್ ಎ3 ಆರೋಪಿಯಾಗಿದ್ದಾರೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾದ ಬಳಿಕ ದರ್ಶನ್ ಗೆ ಸಂಬಂಧಿಸಿದ ಸಾಕಷ್ಟು ಪ್ರಕರಣಗಳು ಹೊರಬರುತ್ತಿದ್ದು, ಇದೀಗ ವಿಜಯಲಕ್ಷ್ಮೀ ಕೂಡ ತೊಂದರೆ ಸಿಲುಕಿಕೊಂಡಿದ್ದಾರೆ. ಅಷ್ಟಕ್ಕೂ ವಿಜಯಲಕ್ಷ್ಮೀ ವಿರುದ್ಧ ದಾಖಲಾಗಿರುವ ಪ್ರರಕಣವೇನೆಂದರೆ, ದರ್ಶನ್ ಅವರು ಮೈಸೂರಿನ ಬಳಿಯಿರುವ ತಮ್ಮ ತೋಟದ ಮನೆಯಲ್ಲಿ ಕಾನೂನು ಬಾಹಿರವಾಗಿ ವಿಶಿಷ್ಟ ಜಾತಿಯ ಬಾರ್ ಹೆಡೆಡ್ ಗೂಸ್ ಬಾತುಕೋಳಿಯನ್ನು ಸಾಕಿದ್ದರು. ಈ ಪಕ್ಷಿಯನ್ನು ವಶಕ್ಕೆ ಪಡೆದಿದ್ದ ಅರಣ್ಯ ಇಲಾಖೆ ಎಫ್ಐಆರ್ ದಾಖಲಿಸಿ, ದರ್ಶನ್ ಸೇರಿದಂತೆ ಸಂಬಂಧಪಟ್ಟವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು.
ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ದರ್ಶನ್ ಹಾಜರಾಗದಿದ್ದಕ್ಕೆ ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮೀಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ವಿಜಯಲಕ್ಷ್ಮೀ ಯಾಕೆ ಸಿಲುಕಿಕೊಂಡರು ಎಂಬ ಪ್ರಶ್ನೆಗೆ ಉತ್ತರ ಮೈಸೂರಿನ ತಿ. ನರಸೀಪುರದ ಬಳಿಯಿರುವ ಫಾರ್ಮ್ ಹೌಸ್ ಪತ್ನಿ ವಿಜಯಲಕ್ಷ್ಮೀ ಹೆಸರಿನಲ್ಲಿದೆ. ಈ ಕಾರಣಕ್ಕೆ ಅವರನ್ನು ಈ ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.
ಫಾರ್ಮ್ ಆಸ್ತಿಯ ಮ್ಯಾನೇಜರ್ ಆಗಿರುವ ನಾಗರಾಜ್ ಅವರನ್ನು ಎ2 ಆರೋಪಿ ಹಾಗೂ ದರ್ಶನ್ ಅವರನ್ನು ಎ3 ಆರೋಪಿಯನ್ನಾಗಿ ಮಾಡಲಾಗಿದೆ. ಸದ್ಯ ಚಾರ್ಜ್ ಶೀಟ್ ಸಲ್ಲಿಕೆ ಸುದ್ದಿ ಹರಿದಾಡುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅರಣ್ಯ ಇಲಾಖೆ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ. ಇದರಿಂದ ದರ್ಶನ್ ಮತ್ತೊಂದು ಸಂಕಷ್ಟಕ್ಕೆ ಸಿಲುಕೊಂಡಂತಾಗಿದೆ.