ತಿರುಮಲ: ಸರಣಿ ರಜೆ ಬಂದ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರಗಳಲ್ಲಿ ವಿಪರೀತ ಭಕ್ತಸಂದಣಿಯಿದ್ದು, ತಿರುಪತಿ ಕ್ಷೇತ್ರದಲ್ಲಿ ಭಾನುವಾರ ಸರತಿ ಸಾಲು 3 ಕಿ. ಮೀ. ದಾಟಿ ಹೋಗಿತ್ತು.
ಶನಿವಾರ, ಭಾನುವಾರ ಹಾಗೂ ಸೋಮವಾರ ಬಕ್ರೀದ್ ರಜೆ ಹಿನ್ನೆಲೆಯಲ್ಲಿ ತಿರುಮಲದ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಭಾರೀ ಜನದಟ್ಟಣೆ ಕಂಡುಬಂದಿದ್ದು, ಭಕ್ತಾದಿಗಳು ದೇವರ ದರ್ಶನಕ್ಕಾಗಿ ಸುಮಾರು 3 ಕಿ.ಮೀ.ವರೆಗೂ ಸರತಿ ಸಾಲಿನಲ್ಲಿ ನಿಂತಿದ್ದರು.
ಚುನಾವಣೆ ಮುಕ್ತಾಯ, ವಾರಾಂತ್ಯ ರಜೆ, ಪರೀಕ್ಷೆಗಳು ಮುಗಿದಿರುವುದು ಜೊತೆಗೆ ಬಕ್ರೀದ್ ರಜೆಯೂ ಸೇರಿದ್ದರಿಂದ ತಿರುಪತಿಗೆ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸೋಮವಾರವೂ ಈ ದಟ್ಟಣೆ ಮುಂದುವರಿದಿದೆ.
ಗುರುವಾರದಿಂದಲೇ ಕ್ಷೇತ್ರಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮನಿಸುತ್ತಿದ್ದರು. ಶನಿವಾರ ಮತ್ತು ಭಾನುವಾರ ಭಕ್ತರ ಸರತಿ ಸಾಲು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ದಾಟಿ ರಸ್ತೆಯಲ್ಲಿ 3 ಕಿ. ಮೀ. ತನಕ ಮುಂದುವರಿದಿತ್ತು.