ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣವಿದ್ದರೆ ಅದು ಅವರ ಮುಂದಿನ ಜೀವನಕ್ಕೆ ಪ್ರೇರಣೆ ನೀಡುತ್ತದೆ. ಹಾಗಾಗಿ ಉತ್ತಮ ನಾಯಕತ್ವದ ಲಕ್ಷಣ ಮಕ್ಕಳಲ್ಲಿ ಮೂಡಿ ಬರಬೇಕು. ಸಂವಿಧಾನದ ಮೌಲ್ಯ ಉಳಿದುಕೊಳ್ಳಬೇಕಾದರೆ ಸರಿಯಾದ ವಿರೋಧ ಪಕ್ಷದ ಅಗತ್ಯವಿದೆ. ಅಂತಹ ಕಲ್ಪನೆ ಎಳೆಯ ವಯಸ್ಸಿನಿಂದಲೇ ಮೂಡಿಬರಬೇಕು ಎಂದು ನ್ಯಾಯವಾದಿ ಮಹೇಶ್ ಕಜೆ ಹೇಳಿದರು.
ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿ ಆಯೋಜಿಸಲಾದ ಶಾಲಾ ಸಂಸತ್ತಿನ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ದೇಶದ ರಾಜಕೀಯದಲ್ಲಿ ಸಮರ್ಥ ನಾಯಕರನ್ನು ಹೊರ ತರಲು ಸಮರ್ಥ ವಿದ್ಯಾವಂತರ ಅವಶ್ಯಕತೆ ಇದೆ. ಹಾಗಾಗಿ ಶಾಲಾ ಮಂತ್ರಿಮಂಡಲದ ರಚನೆ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಕೊಡುವ ಒಂದು ಜೀವನ ಪಾಠ. ಆದ್ದರಿಂದ ಪ್ರತಿಯೊಬ್ಬ ಮಂತ್ರಿಗಳು ಅವರವರ ಕಾರ್ಯಗಳನ್ನು ಕಂಕಣಬದ್ಧರಾಗಿ ನೆರವೇರಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಮಂತ್ರಿಮಂಡಲದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.
ಶಾಲಾ ಪ್ರಿನ್ಸಿಪಾಲ್ ಮಾಲತಿ.ಡಿ., ಉಪ ಪ್ರಿನ್ಸಿಪಾಲ್ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ಶಿಕ್ಷಕಿ ಮಲ್ಲಿಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸನ್ಮಯ್ ಪ್ರಾರ್ಥಿಸಿದರು. ವಿದ್ಯಾರ್ಥಿ ಕನಿಷ್ಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ವಿವಿಕ್ತಾ ರೈ ವಂದಿಸಿದರು. ವಿದ್ಯಾರ್ಥಿನಿಯರಾದ ವೈಷ್ಣವಿ ಎಂ. ಆರ್., ಸಾನ್ವಿ ಆರ್., ಲಾಸ್ಯ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.