ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಹೀನಾಯವಾಗಿ ಸೋತಿದ್ದರೆ ಖಂಡಿತ ಮತಯಂತ್ರಗಳನ್ನು ದೂಷಿಸುವ ಕಾರ್ಯ ನಡೆಯುತ್ತಿತ್ತು. ಆದರೆ ಫಲಿತಾಂಶ ಪ್ರಕಟವಾದಾಗ ಪ್ರತಿಪಕ್ಷಗಳೂ ಕೂಡ ಸಾಧನೆ ಮಾಡಿದ ಕಾರಣ ಮತಯಂತ್ರಗಳು ಬಚಾವಾಗಿದ್ದವು. ಆದರೆ ಫಲಿತಾಂಶ ಪ್ರಕಟವಾಗಿ, ಸರಕಾರವೂ ರಚನೆಯಾದ ಬಳಿಕ ಈಗ ಮತಯಂತ್ರಗಳ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ.
ಈ ಚರ್ಚೆಗೆ ಕಾರಣರಾಗಿರುವವರು ಟೆಸ್ಲಾ ಕಂಪನಿಯ ಎಲಾನ್ ಮಸ್ಕ್ ಚುನಾವಣೆಗಳಲ್ಲಿ ಬಳಸುವ ಇವಿಎಂ ಯಂತ್ರಗಳ ಬಗ್ಗೆ ಎಲಾನ್ ಮಸ್ಕ್ ಅನುಮಾನ ವ್ಯಕ್ತಪಡಿಸಿದ್ದು, ಹ್ಯಾಕರ್‌ಗಳು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಇವಿಎಂ ಗಳನ್ನು ಹ್ಯಾಕ್ ಮಾಡಬಹುದು. ಹಾಗಾಗಿ ಇವಿಎಂ ಗಳನ್ನು ಚುನಾವಣೆಯಲ್ಲಿ ಬಳಸಬಾರದು ಎಂದು ಮಸ್ಕ್ ಹೇಳಿದ್ದಾರೆ.
ಅವರ ಹೇಳಿಕೆಗೆ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ. ಸುರಕ್ಷಿತವಾಗಿರುವ ಡಿಜಿಟಲ್ ಹಾರ್ಡ್‌ವೇರನ್ನು ಯಾರೂ ತಯಾರಿಸಲು ಆಗುವುದಿಲ್ಲ. ಇವಿಎಂಗೆ ಇಂಟರ್‌ನೆಟ್, ಬ್ಲೂಟೂತ್, ವೈಫೈ ಸಂಪರ್ಕ ಇಲ್ಲ ಹಾಗೂ ಹ್ಯಾಕ್ ಮಾಡಲು ಆಗುವುದಿಲ್ಲ ಎಂದು ಭಾರತದಲ್ಲಿ ಇದು ಸಾಬೀತಾಗಿದೆ. ನಾವು ಈ ಕುರಿತು ಒಂದು ಟ್ಯುಟೋರಿಯಲ್ ತೆರೆಯೋಣ ಎಂದು ತಿರುಗೇಟು ನೀಡಿದ್ದಾರೆ.
ಮಸ್ಕ್ ಹೇಳಿಕೆಗೆ ದನಿಗೂಡಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಭಾರತದಲ್ಲಿ ಇವಿಎಂಗಳು ಕಪ್ಪುಪೆಟ್ಟಿಗೆಗಳಾಗಿವೆ. ಅವುಗಳನ್ನು ಪರಿಶೀಲಿಸಲು ಯಾರಿಗೂ ಅನುಮತಿಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ ಹಾಗೂ ಮುಂಬಯಿಯಲ್ಲಿ 48 ಮತಗಳ ಅಂತರದಿಂದ ಸೋತ ಕಾಂಗ್ರೆಸ್‌ನ ಅಭ್ಯರ್ಥಿಯ ಉದಾಹರಣೆ ನೀಡಿದ್ದಾರೆ.
ಸಮಾಜವಾದಿ ಪಕ್ಷ, ಉದ್ಧವ್ ಠಾಕ್ರೆ ಬಣದ ಶಿವಸೇನೆ, ಡಿಎಂಕೆ ಪಕ್ಷಗಳು ಕೂಡ ಮಸ್ಕ್ ಟ್ವಿಟ್ ಅನ್ನು ರೀಟ್ವಿಟ್ ಮಾಡಿವೆ. ಇವಿಎಂಗಳನ್ನು ತಿದ್ದುವ, ತಿರುಚುವ, ರಿಗ್ಗಿಂಗ್ ಮಾಡುವ ಸಾಧ್ಯತೆ ಇದೆ ಅಂತ ಹಲವು ವಿಪಕ್ಷ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.