ಕಾಸರಗೋಡು: ಇತಿಹಾಸ ಪ್ರಸಿದ್ದ ಕಾಸರಗೋಡು ಜಿಲ್ಲೆಯ ಪ್ರಸಿದ್ದ ದೇವಾಲಯ ಶ್ರೀ ಅನಂತಪುರ ದೇವಾಲಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಮರಿ ಮೊಸಳೆ ಮೊದಲ ಬಾರಿಗೆ ಜೂ 14 ರಂದು ದೇವಾಲಯದ ಪ್ರಾಂಗಣವೇರಿ ಗರ್ಭಗುಡಿಯ ಹತ್ತಿರವೇ ವಿಶ್ರಾಂತಿ ಪಡೆಯುವ ಮೂಲಕ ಮರಿ ಬಬಿಯಾನ ದರ್ಶನ ನೀಡಿದೆ.
ಇದರಿಂದ ಭಕ್ತಾದಿಗಳು ಪುಳಕಿತಗೊಂಡರು. ಮರಿ ಬಬಿಯಾ ವಿಶ್ರಾಂತಿ ಪಡೆಯಲು ಬಂದ ಸಮಯದಲ್ಲಿ ಕ್ಷೇತ್ರದ ನಡೆ (ದಾರಿ) ಮುಚ್ಚಿತ್ತು. ಸಂಜೆ ಬಂದು ಕ್ಷೇತ್ರದ ನಡೆ ತೆರೆದ ದೇವಾಲಯದ ಅರ್ಚಕರಿಗೆ ಈ ಪುಣ್ಯ ದೃಶ್ಯ ಗೋಚರವಾಗಿದ್ದು, ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಹಂಚಿದ್ದಾರೆ.
ಈ ಹಿಂದೆ ಇಲ್ಲಿನ ಸರೋವರಲ್ಲಿ ವಾಸವಿದ್ದ 78ರ ಹರೆಯದ ಬಬಿಯಾ ಮೊಸಳೆ 2022ರ ಅಕ್ಟೋಬರ್ 9ರಂದು ಪ್ರಾಣ ತ್ಯಜಿಸಿತ್ತು. ಬಳಿಕ ಕಳೆದ ವರ್ಷ ಮರಿ ಕಾರಣಿಕ ಎಂಬಂತೆ ಮೊಸಳೆಯೊಂದು ಸರೋವರಲ್ಲಿ ಪ್ರತ್ಯಕ್ಷವಾಗಿತ್ತು. ಈ ಮರಿ ಮೊಸಳೆಗೂ ಬಬಿಯಾ ಎಂದೇ ನಾಮಕರಣ ಮಾಡಲಾಗಿತ್ತು.
ಆರಂಭದಲ್ಲಿ ಭಕ್ತರಿಗೆ ಕಾಣಿಸದೆ ಸರೋವರದಲ್ಲಿದ್ದ ಮರಿ ಮೊಸಳೆ ಶುಕ್ರವಾರ ದಿಢೀರನೆ ದೇವಳದ ಪ್ರಾಂಗಣಕ್ಕೆ ಬಂದಿದೆ. ಈ ಮೂಲಕ ಸ್ಪಷ್ಟವಾಗಿ ದೇವಾಲಯದ ಗರ್ಭಗುಡಿ ಸಮೀಪವೇ ಪ್ರತ್ಯಕ್ಷವಾಗಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸಿದೆ.